ಕೆಲವೆಡೆ ಮೆಟ್ರೋ ಪಿಲ್ಲರ್‍ಗಳಲ್ಲಿ ಬಿರುಕು-ಮೇಯರ್ ಗಂಗಾಂಬಿಕೆ ಗರಂ

ಬೆಂಗಳೂರು, ಏ.25- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವೆಡೆ ಮೆಟ್ರೋ ಪಿಲ್ಲರ್‍ಗಳಲ್ಲಿ ಬಿರುಕು ಬಿಟ್ಟಿರುವ ಕುರಿತು ಮೇಯರ್ ಗಂಗಾಂಬಿಕೆ ಗರಂ ಆಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಎಂಆರ್‍ಸಿಎಲ್‍ಗೆ ಪತ್ರ ಬರೆದಿದ್ದಾರೆ.

ಮೆಟ್ರೋ ರೈಲಿನಲ್ಲಿ ಬೆಳಗಿನಿಂದ ರಾತ್ರಿವರೆಗೆ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ.ಪದೇ ಪದೇ ಮೆಟ್ರೋ ಪಿಲ್ಲರ್‍ಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗುತ್ತಲೇ ಇದ್ದು, ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಆತಂಕಪಡುವಂತಾಗಿದೆ.

ಕೂಡಲೇ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು.ನಗರದಲ್ಲಿರುವ ಮೆಟ್ರೋ ನಿಲ್ದಾಣಗಳನ್ನು ಮತ್ತು ಪಿಲ್ಲರ್‍ಗಳನ್ನು ತಕ್ಷಣವೇ ಸಂಪೂರ್ಣ ಪರಿಶೀಲನೆ ನಡೆಸುವಂತೆ ಮೇಯರ್ ಸೂಚಿಸಿದ್ದಾರೆ.

ಗಂಗಾಂಬಿಕೆ ಅವರ ವಾರ್ಡ್‍ನಲ್ಲೇ ಮೆಟ್ರೋ ಪಿಲ್ಲರ್‍ನಲ್ಲಿ ಬಿರುಕು ಬಿಟ್ಟಿತ್ತು. ಇತ್ತೀಚೆಗಷ್ಟೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಬಿರುಕು ಬಿಟ್ಟ ಮೆಟ್ರೋಗಳನ್ನು ಪರಿಶೀಲಿಸಿದ್ದೆ. ಆಗಲೇ ಬಿಎಂಆರ್‍ಸಿಎಲ್‍ಗೆ ಪತ್ರ ಬರೆದು ಬಿರುಕು ಬಿಟ್ಟಿರುವ ಪಿಲ್ಲರ್‍ಗಳನ್ನು ಸದೃಢಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ.ಆದರೂ ಮತ್ತೆ ಕೆಲವು ಪಿಲ್ಲರ್‍ಗಳಲ್ಲಿ ಬಿರುಕು ಬಿಟ್ಟಿರುವುದಾಗಿ ವರದಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಮೆಟ್ರೋ ರೈಲು ಮಾರ್ಗದ ಎಲ್ಲ ಪಿಲ್ಲರ್‍ಗಳನ್ನೂ ತಪಾಸಣೆ ನಡೆಸಿ ಕೂಲಂಕಶವಾಗಿ ಪರಿಶೀಲಿಸಿ ಪಿಲ್ಲರ್‍ಗಳು ಹಾಗೂ ಇನ್ನಿತರೆ ಭಾಗಗಳಲ್ಲಿ ಬಿರುಕು ಬಿಟ್ಟಿದ್ದಲ್ಲಿ ಅವುಗಳನ್ನು ಸರಿಪಡಿಸಿ ಸದೃಢಗೊಳಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಮೇಯರ್ ಬಿಎಂಆರ್‍ಸಿಎಲ್‍ಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ