ಮತದಾನ ಮಾಡದಿರಲು ನಿರ್ಧರಿಸಿದ ಕಿತ್ತಲಿ ಗ್ರಾಮದ ಗ್ರಾಮಸ್ಥರು

ಬಾದಾಮಿ,ಏ.22-ವಸತಿ ಹಾಗೂ ಮೂಲಸೌಕರ್ಯಗಳಿಗೆ ಆಗ್ರಹಿಸಿ ತಾಲೂಕಿನ ಕಿತ್ತಲಿ ಗ್ರಾಮದ ಗ್ರಾಮಸ್ಥರು ಲೋಕಸಭೆ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ತಾಲೂಕಿನ ಕಿತ್ತಲಿ ಗ್ರಾಮದಲ್ಲಿ 1995-96ರಲ್ಲಿ ಇಂದಿರಾ ಆವಾಸ್ ವಸತಿ ಯೋಜನೆಯಡಿ 20 ಮನೆಗಳನ್ನು ನಿರ್ಮಿಸಿದ್ದು, ಇಲ್ಲಿ ನಿಯಮಾನುಸಾರ ಒಳಚರಂಡಿ ನಿರ್ಮಾಣ ಮಾಡಿಲ್ಲ. ಇಂದಿರಾ ಆವಾಸ್ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಆಶ್ರಯ ವಸತಿ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಪ್ಲಾಟ್‍ಗಳಲ್ಲಿ ಅತಿಕ್ರಮಣವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ.

ಈ ಸಮಸ್ಯೆ ಬಗೆಹರಿಸಲು ಕೋರಿ ಕಿತ್ತಲಿ ಗ್ರಾಮದ ಮಹಿಳೆ ರೇಣುಕಾ ಪಲ್ಲೇದ ಸೇರಿದಂತೆ 20ಕ್ಕೂ ಹೆಚ್ಚು ಫಲಾನುಭವಿಗಳು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರಿಗೆ ಗ್ರಾಮದ ಫಲಾನುಭವಿಗಳು ಕಳೆದ ಜೂನ್ 9ರಂದು ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೂ ಸಮಸ್ಯೆ ಬಗೆಹರಿಯದ ಕಾರಣ ಬರುವ ನಾಳೆ ಜರುಗಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಈ ಕುರಿತು ಹಲವಾರು ಬಾರಿ ತಾಪಂ ಇಒ ಅವರಿಗೆ ಮತ್ತು ಸಂಬಂಧಿಸಿದ ಗ್ರಾಪಂ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.ಮತ್ತು ಕಳೆದ ಸೆ. 1ರಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಇದಕ್ಕೆ ಪೂರಕವಾಗಿ ಗ್ರಾಮಸ್ಥರ ಮನವಿ ಮತ್ತು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಪತ್ರದೊಂದಿಗೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಸೆ. 5ರಂದು ತಾಪಂ ಇಒ ಭೀಮಪ್ಪ ಲಾಳಿ ಇವರಿಗೆ ಪತ್ರ ಬರೆದಿದ್ದಾರೆ. ಸದರಿ ಪತ್ರದಂತೆ ತಾಪಂ ಇಒ ಭೀಮಪ್ಪ ಲಾಳಿ ಅವರು ಅಗತ್ಯಕ್ರಮ ತೆಗೆದುಕೊಳ್ಳುವಂತೆ ಕಿತ್ತಲಿ ಗ್ರಾಪಂ ಪಿಡಿಒ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ 23ವರ್ಷಗಳಿಂದ ಸಮಸ್ಯೆ ಹಾಗೆ ಉಳಿದಿದೆ.ಇದನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಮನವಿ ಸಲ್ಲಿಸಿದ್ದಾರೆ. ಪತ್ರಕ್ಕೆ ಪತ್ರ ಬಂತೇ ವಿನಃ ಸಮಸ್ಯೆ ಬಗೆಹರಿಯಲಿಲ್ಲ. ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಪತ್ರಕ್ಕೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬಂತಾಗಿದೆ.

ಇಂತಹ ಜನಪ್ರತಿನಿಧಿಗಳ ಮಾತೆ ಅಧಿಕಾರಿಗಳು ಕೇಳಲಿಲ್ಲ ಎಂದು ಇನ್ನು ಜನಸಾಮಾನ್ಯರ ಪಾಡೇನು?ಎಂಬುದು ಕುಟುಂಬದವರ ಯಕ್ಷ ಪ್ರಶ್ನೆ. ಆದ್ದರಿಂದ ಸಮಸ್ಯೆ ಬಗೆಹರಿಯುವವರೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ