ಬೂತ್‍ನಲ್ಲಿ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಆರೋಪಿಯ ಬಂಧನ

ಹುಣಸೂರು, ಏ.22- ಮತದಾನದ ವೇಳೆ ಮತಗಟ್ಟೆಗೆ ನೇಮಕವಾಗಿದ್ದ ಕಾನ್‍ಸ್ಟೆಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧಿಸಿದ್ದಾರೆ.

ನಗರದ ಸದಾಶಿವನಕೊಪ್ಪಲಿನ ರೌಡಿಶೀಟರ್ ಸುನಿಲ್ ಅಲಿಯಾಸ್ ಪಾಪು ಬಂಧಿತ ಆರೋಪಿ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುನಿಲ್‍ನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಏ.19ರವರೆಗೆ ತುಮಕೂರು ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು.

ಹುಣಸೂರಿನಿಂದ ಸುನಿಲ್‍ನನ್ನು ತುಮಕೂರು ಜಿಲ್ಲೆಯಶಿರಾಕ್ಕೆ ಪೊಲೀಸರೇ ಕರೆದೊಯ್ದು ಬಿಟ್ಟಿದ್ದರು. ಆದರೆ ಏ.18 ರಂದು ಸದಾಶಿವನ ಕೊಪ್ಪಲು ಪ್ರಾಥಮಿಕ ಶಾಲೆಯ ಮತಕೇಂದ್ರದಲ್ಲಿ ಸಂಜೆ 5ರ ವೇಳೆಗೆ ಬಂದು ಮತದಾನ ಮಾಡಿ ಹೊರ ಬರುವ ವೇಳೆ ಬೂತ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಅನಿಲ್‍ಕುಮಾರ್ ತಾವು ಗಡಿಪಾರಾದ ರೌಡಿಶೀಟರ್ ಆಗಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಬಂದಿರುವ ಬಗ್ಗೆ ಪ್ರಶ್ನಿಸಿ ಹಿರಿಯ ಅಧಿಕಾರಿಗಳು ಬರುವವರೆಗೆ ಕೊಠಡಿಯಲ್ಲೇ ಕುಳಿತಿರುವಂತೆ ಸೂಚಿಸಿದ್ದರು.

ಈ ವೇಳೆ ಸುನಿಲ್‍ನನ್ನು ಆತನ ಸಹಚರರು ಎಷ್ಟೇ ತಿಳಿ ಹೇಳಿದರೂ ಕೇಳದೆ ಗುಂಪುಕಟ್ಟಿಕೊಂಡು ಮತಗಟ್ಟೆಗೆ ಬಂದು ಪೇದೆಯನ್ನು ತಳ್ಳಿ ಬಲವಂತವಾಗಿ ಸುನಿಲ್‍ನನ್ನು ಕರೆದೊಯ್ದಿದ್ದರು.

ಈ ಬಗ್ಗೆ ಪೇದೆ ಅನಿಲ್‍ಕುಮಾರ್ ನೀಡಿದ ದೂರಿನನ್ವಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಹಾಗೂ ಸಮವಸ್ತ್ರದಲ್ಲಿದ್ದ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಪರಾರಿಯಾಗಿದ್ದ ಆರೋಪಿ ಸುನಿಲ್‍ನನ್ನು ಎಸ್.ಐ.ಜೆ.ಇ.ಮಹೇಶ್, ಮುಖ್ಯಪೇದೆ ಜಗದೀಶ್ ಹಾಗೂ ಇರ್ಫಾನ್ ಮತ್ತಿತರ ಸಿಬ್ಬಂದಿ ನಿನ್ನೆ ಸದಾಶಿವನ ಕೊಪ್ಪಲಿನಲ್ಲಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ