ನಕಲಿ ಐಪಿಎಸ್ ಅಧಿಕಾರಿಯ ಬಂಧನ

ಮೈಸೂರು,ಏ.22- ನಕಲಿ ಐಪಿಎಸ್ ಅಧಿಕಾರಿಯೊಬ್ಬನನ್ನು ನಗರದ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ 3ನೇ ಹಂತ , 3ನೇ ಮುಖ್ಯರಸ್ತೆಯ, ಎ ಬ್ಲಾಕ್ ನಿವಾಸಿ ಸಿ.ಎನ್.ದಿಲೀಪ್ ಬಂಧಿತ ಆರೋಪಿ.

ಬಂಧಿತ ಕೆ.ಆರ್.ಠಾಣೆಗೆ ದೂರವಾಣಿ ಕರೆ ಮಾಡಿ ನಾನು ಐಪಿಎಸ್ ಅಧಿಕಾರಿ. ನಾನು ಮತ್ತು ಕುಟುಂಬದವರು ಪ್ರವಾಸ ಕೈಗೊಂಡಿದ್ದೇವೆ. ನಮಗೆ ಟಯೋಟಾ ಇನ್ನೋವಾ ಎಸಿ ಕಾರ್ ವ್ಯವಸ್ಥೆ ಮಾಡುವಂತೆ ಕೇಳಿದ್ದಾನೆ.

ಈ ಮಾಹಿತಿ ಬಗ್ಗೆ ಇನ್‍ಸ್ಪೆಕ್ಟರ್ ನಾರಾಯಣಸ್ವಾಮಿ ಅವರು ಗಮನಕ್ಕೆ ಸಬ್‍ಇನ್‍ಸ್ಪೆಕ್ಟರ್ ಸುನೀಲ್ ತಂದಿದ್ದಾರೆ.

ನಂತರ ಮೊಬೈಲ್‍ಗೆ ಕರೆ ಮಾಡಿ ವಿಚಾರಿಸಲು ಇನ್‍ಸ್ಪೆಕ್ಟರ್‍ಗೂ ನಾನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ.ಇದಾದ ನಂತರ ಏ.18ರಂದು ನಗರದ ಮನೆಯ ವಿಳಾಸ ನೀಡಿ 18ರಂದು ವಾಹನ ಕಳುಹಿಸುವಂತೆ ತಿಳಿಸಿದ್ದ.

ಈತ ಹಲವು ಬಾರಿ ಇನ್‍ಸ್ಪೆಕ್ಟರ್‍ಗೆ ಪೋನ್ ಮಾಡಿದ್ದರಿಂದ ಅನುಮಾನಗೊಂಡ ಇನ್‍ಸ್ಪೆಕ್ಟರ್ ದಿಲೀಪ್‍ಗೆ ಮತ್ತೆ ಕರೆ ಮಾಡಿ ಸರ್ ಕಾರು ಅರೆಂಜ್ ಆಗಿದೆ. ತಾವು ಯಾವ ವರ್ಷ ಐಪಿಎಸ್ ಅಧಿಕಾರಿ ಎಂದಾಗ 2019ರ ಜನರಿ 1ರ ಅಧಿಸೂಚನೆಯ ಕ್ರಮಸಂಖ್ಯೆ 144ರಲ್ಲಿ 759ನೇ ರ್ಯಾಂಕ್‍ನಲ್ಲಿದ್ದೇನೆ ನೋಡಿ ಎಂದು ದಿಲೀಪ್ ಹೇಳಿದ್ದಾನೆ.

ಈ ಬಗ್ಗೆ ಇನ್‍ಸ್ಪೆಕ್ಟರ್ ಪರಿಶೀಲಿಸಿದಾಗ ರಾಜಸ್ಥಾನ ಹೋಂ ಟೌನ್‍ನ ಕೇರಳ ಕೇಡರ್‍ನ 759ನೇ ರ್ಯಾಂಕ್ ಐಪಿಎಸ್ ಪ್ರೊಬೆಷನರಿ ಎಂಬ ಮಾಹಿತಿ ದೊರೆತಾಗ ದಿಲೀಪ್ ನಕಲಿ ಎಂಬುದನ್ನು ದೃಢಪಟ್ಟಿದೆ. ಕೂಡಲೇ ಇನ್‍ಸ್ಪೆಕ್ಟರ್ ಆತನನ್ನು ಬಲೆಗೆ ಕೆಡವಲು ಇಬ್ಬರು ಪೊಲೀಸರನ್ನು ಮನೆ ಬಳಿ ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಬಿಎ ಪದವೀಧರನಾಗಿದ್ದ ದಿಲೀಪ್, ಅಮ್ಮ, ತಂಗಿಯೊಂದಿಗೆ ವಾಸ ಮಾಡುತ್ತಿದ್ದು, ತಾನು ಐಪಿಎಸ್ ಅಧಿಕಾರಿ ಎಂದು ಹಲವು ಸಂಘಸಂಸ್ಥೆಗಳಿಂದ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿದೆ.

ನಂತರ ಏ.20ರಂದು ಆತನ ಮನೆಗೆ ಪೊಲೀಸರೊಂದಿಗೆ ಕಾರನ್ನು ಕಳುಹಿಸಿ ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ತಾನು ನಕಲಿ ಅಧಿಕಾರಿ ಎಂದು ಒಪ್ಪಿಕೊಂಡಿದ್ದಾನೆ.

ತನಿಖೆ ಸಂದರ್ಭದಲ್ಲಿ ಆತ ಕೇಂದ್ರ ಗೃಹ ಇಲಾಖೆಯ ಅಧಿಸೂಚನೆಯನ್ನು ಡೌನ್‍ಲೋಡ್ ಮಾಡಿಕೊಂಡು ಪಿಡಿಎಫ್‍ನಲ್ಲಿ ಕ್ರಮ ಸಂಖ್ಯೆ 144ರಲ್ಲಿ ತನ್ನ ಹೆಸರು ಸೇರಿಸಿಕೊಂಡು ಅದೇ ಪ್ರತಿಯನ್ನು ತೋರಿಸಿ ತಾನು ಐಪಿಎಸ್ ಅಧಿಕಾರಿ ಎಂದು ಹಲವರನ್ನು ವಂಚಿಸಿರುವ ಬಗ್ಗೆ ತಿಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ