ಲಂಕಾ ಬಾಂಬ್ ದಾಳಿಯಲ್ಲಿ ನೆಲಮಂಗಲ ಮತ್ತು ತುಮಕೂರಿನ ಐದು ಮಂದಿ ಸಾವು

ನೆಲಮಂಗಲ, ಏ.22- ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ನೆಲಮಂಗಲ ಮತ್ತು ತುಮಕೂರಿನ 7 ಮಂದಿಯಲ್ಲಿ 5 ಮಂದಿ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದು, ಇತರ ಇಬ್ಬರು ನಾಪತ್ತೆಯಾಗಿದ್ದಾರೆ.

ಕೆ.ಜಿ.ಹನುಮಂತರಾಯಪ್ಪ, ಎಂ.ರಂಗಪ್ಪ , ಕೆ.ಎಂ.ಲಕ್ಷ್ಮೀನಾರಾಯಣ್, ಗೋವೇನಹಳ್ಳಿ ಶಿವಣ್ಣ ಹಾಗೂ ಲಕ್ಷ್ಮಣ ಗೌಡ ರಮೇಶ್ ಅವರು ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರು ಎಂದು ಗುರುತಿಸಲಾಗಿದೆ.

ಇವರ ಜತೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಮಾರೇಗೌಡ ಮತ್ತು ಪುಟ್ಟರಾಜು ಎಂಬುವರು ನಾಪತ್ತೆಯಾಗಿದ್ದು , ಅವರ ಹುಡುಕಾಟ ನಡೆಸಲಾಗುತ್ತಿದೆ.

ನೆಲಮಂಗಲ ಮತ್ತು ತುಮಕೂರಿನವರಾದ ಈ 7 ಮಂದಿ ಸ್ನೇಹಿತರಾಗಿದ್ದು , ಪ್ರತಿ ವರ್ಷ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದ್ದರು ಎನ್ನಲಾಗಿದೆ.

ಜೆಡಿಎಸ್ ಮುಖಂಡರಾಗಿದ್ದ ಇವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸಿದ್ದರು.

ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಕಳೆದ ಶನಿವಾರ ರಾತ್ರಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು.ನಿನ್ನೆ ಬೆಳಗ್ಗೆ ಕೊಲಂಬೊದಲ್ಲಿರುವ ಶಾಂಗ್ರಿಲಾ ಹೊಟೇಲ್‍ನಲ್ಲಿ ತಂಗಿದ್ದರು.

ಹೊಟೇಲ್‍ನ 6ನೆ ಮಹಡಿಯಲ್ಲಿರುವ 618 ಮತ್ತು 619ನೆ ರೂಮಿನಲ್ಲಿ ತಂಗಿದ್ದ ಎಲ್ಲರೂ ಸ್ನಾನ ಮುಗಿಸಿ ಬೆಳಗ್ಗೆ 8.45ರ ಸುಮಾರಿಗೆ ಹೊಟೇಲ್‍ನ ಮೂರನೆ ಮಹಡಿಯಲ್ಲಿರುವ ಊಟದ ಹಾಲ್‍ಗೆ ಆಗಮಿಸಿದ್ದರು.

ಈ ಎಲ್ಲರೂ ಊಟದ ಹಾಲ್‍ಗೆ ಆಗಮಿಸಿದ ಸಂದರ್ಭದಲ್ಲೇ ಬಾಂಬ್ ಸ್ಫೋಟಿಸಿ ಈ ದುರ್ಘಟನೆ ಸಂಭವಿಸಿದೆ.

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಮಂದಿಯಲ್ಲಿ 5 ಮಂದಿ ಮೃತಪಟ್ಟಿರುವುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್‍ನಲ್ಲಿ ಖಚಿತಪಡಿಸಿದ್ದಾರೆ.

ಕೊಲಂಬೋ ಸರಣಿ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಕನ್ನಡಿಗರು ಮೃತಪಟ್ಟಿರುವುದು ದುಃಖಕರ ಸಂಗತಿ.ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗದವರಿಗೆ ನೀಡಲಿ.ಇಂತಹ ದುಃಖದ ಸಂದರ್ಭದಲ್ಲಿ ಮೃತರ ಕುಟುಂಬದ ಬೆಂಬಲಕ್ಕೆ ಸರ್ಕಾರ ಇರಲಿದೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕಾಣೆಯಾಗಿರುವ ಮಾರೇಗೌಡ ಮತ್ತು ಪುಟ್ಟರಾಜು ಎಂಬುವರ ಪತ್ತೆಗೆ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದು , ಈ ಕುರಿತಂತೆ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ