ದೇಶಕ್ಕಾಗಿ ಆಸ್ತಿ ಅಡ ಇಟ್ಟ ಸಂಗಣ್ಣ ಮೋದಿ ಪ್ರಧಾನಿ ಮಾಡಲು ಸಂಸದ ಸಂಗಣ್ಣ ಸಂಕಲ್ಪ

ಕೊಪ್ಪಳ, ಆ 21: ಚುನಾವಣೆ ಎಂದ ಮೇಲೆ ಪ್ರತಿಯೊಬ್ಬ ಅಭ್ಯರ್ಥಿ ಹಣ ಖರ್ಚು ಮಾಡಲೇಬೇಕು. ಹಣ ಇಲ್ಲದಿದ್ದರೆ ಆಸ್ತಿಯನ್ನಾದರೂ ಮಾರಿಯೋ ಅಥವಾ ಯಾರಿಗಾದರು ಆಸ್ತಿಯನ್ನು ಅಡಮಾನ ಇಟ್ಟು ಎಲೆಕ್ಷನ್ ಎದುರಿಸಬೇಕು ಎಂದು ಕೇಳಿದ್ದೆವು. ಆದರೆ ಇದೀಗ ಕೊಪ್ಪಳ ಕ್ಷೇತ್ರದಲ್ಲಿ ಈ ಮಾತು ಸತ್ಯವಾಗಿದೆ.

ಅದರಲ್ಲೂ ಮೋದಿ ಪ್ರಧಾನಿ ಆಗಲೆಂದು ಅನೇಕರು ತಮ್ಮದೇ ಶೈಲಿಯಲ್ಲಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ತಮ್ಮ ಆಸ್ತಿಯನ್ನೇ ಅಡ ಇಟ್ಟು ಚುನಾವಣೆ ಮಾಡುತ್ತಿದ್ದಾರೆ.

ಹೌದು, ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಈ ಬಾರಿಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ಮೋಡಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅವರು ಪ್ರಧಾನಿ ಆಗಬೇಕೆಂದರೆ ಕೊಪ್ಪಳ ಕ್ಷೇತ್ರ ಗೆಲ್ಲಲೇಬೇಕು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲೇಬೇಕು. ಸಂಗಣ್ಣ ಕರಡಿಯವರ ಬಳಿ ಈ ಚುನಾವಣೆ ಎದುರಿಸುವಷ್ಟು ಹಣವಿಲ್ಲದ ಕಾರಣ ಇದೀಗ ತಮ್ಮ ಬಳಿ ಇದ್ದ ಬಹುತೇಕ ಆಸ್ತಿಯನ್ನು ಮಾರಾಟ ಮಾಡುವುದು, ಅಡಮಾನ ಇಟ್ಟಿರುವ ಸಂಗತಿ ತಿಳಿದುಬಂದಿದೆ.

ಎದುರಾಳಿ ಸಾಕಷ್ಟು ಹಣಬಲ ಹೊಂದಿದ್ದು, ಅವರನ್ನು ಕಟ್ಟಿಹಾಕಿ ತಾವು ಗೆಲ್ಲಲೇಬೇಕು ಎಂದು ಪಣತೊಟ್ಟು ಕ್ಷೇತ್ರಾದ್ಯಂತ ಮಿಂಚಿನ ಸಂಚಾರದ ಮೂಲಕ ಪ್ರಚಾರ ನಡೆಸಿದ್ದಾರೆ. ಆದರೆ ಚುನಾವಣೆಗೆ ಸಾಕಷ್ಟು ಹಣ ಬೇಕಾದ ಕಾರಣ ತಮ್ಮ ಬಳಿ ಅಗತ್ಯಕ್ಕಿಂತ ಕಡಿಮೆ ಹಣ ಇರುವ ಕಾರಣ ಇದೀಗ ಆಸ್ತಿ ಅಡ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿದೆ. ಕಳೆದ ಒಂದು ವಾರದಿಂದ ಕೊಪ್ಪಳ ನಗರದಲ್ಲಿನ ಉಪನೋಂದಣಿ ಕಚೇರಿಯಲ್ಲಿ ಹಣಕ್ಕಾಗಿ ಕೆಲವರ ಬಳಿ ಆಸ್ತಿ ಅಡ ಇಟ್ಟಿರುವ ಬಗ್ಗೆ ದಾಖಲೆಗಳು ದೊರೆತಿವೆ.

ಕೊಪ್ಪಳ ನಗರದಲ್ಲಿ ಇರುವ ಬಂಗಲೆ, ತಾಲೂಕಿನ ವಿವಿಧ ಕಡೆ ಇರುವ ಜಮೀನನ್ನು ಅಡ ಇಟ್ಟಿದ್ದು, ಹಣ ನೀಡಿದ ಬ್ಯಾಂಕ್, ಸಂಸ್ಥೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ಆಸ್ತಿಯನ್ನು ಮಾರ್ಟ್‌ಗೇಜ್ ಮಾಡಿಸಿದ್ದಾರೆ ಎನ್ನಲಾಗಿದೆ. ಸಂಗಣ್ಣ ಕರಡಿ ಅವರು ಈ ಎಲ್ಲಾ ಪ್ರಕ್ರಿಯೆಗಳನ್ನು ಪ್ರತ್ಯಕ್ಷ ನೋಡಿದ ವ್ಯಕ್ತಿ ಖಚಿತ ಮಾಹಿತಿ ನೀಡಿದ್ದಾರೆ. ಎಷ್ಟು ಹಣಕ್ಕೆ ಅಡಮಾನ ಇಟ್ಟಿದ್ದಾರೆ ಎನ್ನುವುದು ತಿಳಿಯಬೇಕಿದೆ.

ಒಮ್ಮೆ ಶಾಸಕ, ಮಂತ್ರಿ ಆದರೆ ನೂರಾರು ಕೋಟಿ ರೂಪಾಯಿ ಮಾಡಿಕೊಳ್ಳುವ ಅದೆಷ್ಟೋ ರಾಜಕಾರಣಿಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಚುನಾವಣೆ ನಡೆಸುವ ಸಲುವಾಗಿ ಇರುವ ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಅಡ ಇಡುವುದನ್ನು ಇದೇ ಮೊದಲು ಕೇಳಿರಬಹುದು. ಯಾವುದೇ ಹಂತದ ಚುನಾವಣೆಗಳು ಇಂದು ಹಣವಿಲ್ಲದೆ ನಡೆಯುವುದಿಲ್ಲ ಎಂಬ ಅರಿವು ಎಲ್ಲರಿಗೂ ಇದೆ. ಹಣ ಕೊಟ್ಟರೆ ಮಾತ್ರ ಮತ ಹಾಕುವ ಮತದಾರರು ನಮ್ಮ ಮಧ್ಯೆ ಇದ್ದಾರೆ. ಅನೇಕ ಬಾರಿ ಶಾಸಕನೋ ಅಥವಾ ಸಂಸದನೋ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಅವರನ್ನು ಆಯ್ಕೆ ಮಾಡುವ ಪದ್ಧತಿ ಎಂದೋ ಮರೆಯಾಗಿದೆ. ಈಗೇನಿದ್ದರೂ ಹಣ ಕೊಟ್ಟರೆ ಮಾತ್ರ ಮತಗಟ್ಟೆಯತ್ತ ಹೋಗಿ ಮತ ಹಾಕುವ ಜಾಯಮಾನದ ಜನತೆ ಹೆಚ್ಚಾಗಿದ್ದಾರೆ.

ಸಾವಿರಾರು, ನೂರಾರು ಕೋಟಿ ಹಣ ಮಾಡಿದ ರಾಜಕಾರಣಿಗಳು ಇದ್ದಾರೆ. ಹಾಗಂತ ಎಲ್ಲರೂ ಬಾಯಿಯಲ್ಲಿ ಚಿನ್ನದ ಚಮಚಾ ಇಟ್ಟುಕೊಂಡುಬರುವುದಿಲ್ಲ ಮತ್ತು ಹಣವನ್ನೂ ಮಾಡಿಕೊಳ್ಳದೇ ಇರುವ ರಾಜಕಾರಣಿಗಳು ನಮ್ಮಗಳ ಮಧ್ಯೆ ಇದ್ದಾರೆ. ಅಂತವರ ಸಾಲಿಗೆ ಸೇರುವ ಸಂಗಣ್ಣ ಕರಡಿ ಇಂದು ಲೋಕಸಭಾ ಚುನಾವಣೆ ಎದುರಿಸಿ ಏನಕೇನ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಹಾಗೆ ಆಗಲು ಇಲ್ಲಿ ತಾವು ಗೆಲ್ಲಬೇಕು ಎನ್ನುವ ಉದ್ದೇಶದಿಂದ ಇರುವ ಆಸ್ತಿಯನ್ನು ಅಡ ಇಟ್ಟಿದ್ದಾರೆ. ಕೊನೆಗೆ ಕ್ಷೇತ್ರದಲ್ಲಿ ಹಣವಂತರು ವರ್ಸಸ್ ಗುಣವಂತರ ಮಧ್ಯೆ ಬಿಗ್ ಫೈಟ್ ನಡೆಯುತ್ತಿದ್ದು, ಯಾರಿಗೆ ವಿಜಯಮಾಲೆ ದಕ್ಕುತ್ತೆ ಎನ್ನುವುದೇ ಕುತೂಹಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ