ಕಾಂಗ್ರೇಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಕೆಪಿಸಿಸಿ-ತಿರುಗಿಬಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ

ತುಮಕೂರು, ಏ.20-ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರುದ್ಧವಾಗಿ ಕೆಲಸ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಮುಂದಾದ ಬೆನ್ನಲ್ಲೇ ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿರುಗಿಬಿದ್ದಿದ್ದು, ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತರನ್ನು ಉಚ್ಚಾಟನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ತುಮಕೂರು ಲೋಕಸಭೆ ಚುನಾವಣೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪರ್ಧಿಸಿದ್ದರು. ಮೈತ್ರಿ ಅಭ್ಯರ್ಥಿಯಾದ ದೇವೇಗೌಡರ ಪರವಾಗಿ ಕೆಲಸ ಮಾಡದೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮಧುಗಿರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್, ಮಧುಗಿರಿ ಗ್ರಾಮಾಂತರ ಅಧ್ಯಕ್ಷರಾದ ನಾಗಾರ್ಜುನ್ ಅವರನ್ನು ಕೆಪಿಸಿಸಿ ಉಚ್ಚಾಟನೆ ಮಾಡಿದೆ.

ಇಂದು ಈ ಇಬ್ಬರು ನಾಯಕರ ಜೊತೆ ಸಭೆ ನಡೆಸಿದ ಕೆ.ಎನ್.ರಾಜಣ್ಣ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಇಬ್ಬರು ಪಕ್ಷದ ನಿಷ್ಠಾವಂತ ಮುಖಂಡರು. ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದವರು ಯಾರು?ಯಾವ ಆಧಾರದ ಮೇಲೆ ಈ ಇಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.ಇನ್ನೆರಡು ಮೂರು ದಿನಗಳಲ್ಲಿ ಉಚ್ಚಾಟನೆ ಹಿಂಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಲಿದೆ.ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸೇರಿದಂತೆ ಎಲ್ಲಾ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಕೊಡುತ್ತಾರೆ. ಮಧುಗಿರಿಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ ರಾಜಣ್ಣ ಎಚ್ಚರಿಕೆ ನೀಡಿದರು.

ಯಾರದೋ ಮಾತು ಕೇಳಿ ನನ್ನ ಕ್ಷೇತ್ರದ ಕಾರ್ಯಕರ್ತರ ಮೇಲೆ ಕ್ರಮಕೈಗೊಳ್ಳುವುದಾದರೆ ನಾನು ಮುಖಂಡನಾಗಿ ಇರುವುದಾದರೂ ಏಕೆ?ಕೆಳ ಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಬಾರದು.ಪಕ್ಷ ಉಳಿಯಬೇಕು ಎಂದರೆ ಹೈಕಮಾಂಡ್ ಸುಮ್ಮನಿರಬೇಕು. ಇಲ್ಲ, ನಾವು ಕ್ರಮಕೈಗೊಳ್ಳುತ್ತೇವೆ ಎಂದರೆ ನಿಮ್ಮಿಷ್ಟ ಬಂದಂತೆ ಮಾಡಿಕೊಳ್ಳಿ ಎಂದು ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇವರದೊಂದೇ ಅಂಗಡಿಯಿಲ್ಲ ಬೇರೆ ಬೇರೆ ಅಂಗಡಿಗಳಿವೆ. ಎಲ್ಲಿ ಸಾಮಾನು ಸಿಗುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಪಕ್ಷವನ್ನು ರಾಜಣ್ಣ ಅಂಗಡಿಗೆ ಹೋಲಿಕೆ ಮಾಡಿ ಮಾತನಾಡಿದರು.

ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಪಕ್ಷವಿರೋಧಿ ಎಂದು ಹಣೆಪಟ್ಟಿ ಕಟ್ಟಿ ಕ್ರಮಕೈಗೊಳ್ಳುವುದೇಕೆ? ದೇವೇಗೌಡರಿಗೆ ಮಧುಗಿರಿಯಲ್ಲಿ ಒಂದು ಲಕ್ಷ ಲೀಡ್ ಕೊಡಿಸುತ್ತೇವೆ. ಕೊರಟಗೆರೆಯಲ್ಲಿ 1.5 ಲಕ್ಷ ಲೀಡ್ ಸಿಗಲಿದೆ.ಫಲಿತಾಂಶ ಬರುವವರೆಗೂ ಕಾಯಬೇಕು. ಇಡೀ ಜಿಲ್ಲೆಯನ್ನು ದೇವೇಗೌಡರ ಮಯ ಮಾಡುತ್ತೇವೆ ಎಂದು ರಾಜಣ್ಣ ಹೇಳಿದರು.

ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದೇವೇಗೌಡರು ಬಂದು ಸ್ಪರ್ಧಿಸಿದ್ದಕ್ಕೆ ನಮಗೆ ಅಸಮಾಧಾನವಿದೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳದಿದ್ದರೆ ನಮ್ಮ ವಿರೋಧ ಇದ್ದೇ ಇರುತ್ತಿತ್ತು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡಿದ್ದೇವೆ. ಜನ ದೇವೇಗೌಡರನ್ನು ಗೆಲ್ಲಿಸುತ್ತಾರೆ. ಆ ಜನರಲ್ಲಿ ನಾನೂ ಒಬ್ಬ ಇರುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಮೇಲೆ ನನಗೆ ಕೋಪವಾಗಲಿ, ಆಕ್ರೋಶವಾಗಲಿ ಇಲ್ಲ. ಈವರೆಗೂ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರುತ್ತೇನೆ ಎಂಬುದು ವದಂತಿ. ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರನ್ನು ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಬಾರಿ ನಮ್ಮ ಮನೆಗೆ ಬಂದಿದ್ದಾರೆ. ಅದಕ್ಕೆಲ್ಲ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ.ಬಿಜೆಪಿ ಬಗ್ಗೆ ನನಗೆ ಸ್ಪಷ್ಟ ನಿಲುವಿದೆ. ಇಲ್ಲವಾದರೆ ನಾನು ಯಾವತ್ತೋ ಬಿಜೆಪಿ ಸೇರುತ್ತಿದ್ದೆ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ