ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು-ಮಾಜಿ ಸಚಿವ ಎಚ್.ಕೆ.ಪಾಟೀಲ್

ಧಾರವಾಡ,ಏ.17- ರೈತರು, ಬಡವರನ್ನು ಸಂಕಷ್ಟದಿಂದ ಪಾರು ಮಾಡಲು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಕೆ.ಪಾಟೀಲ ಇಂದಿಲ್ಲಿ ಹೇಳಿದರು.

ಅವರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಗರದ ಮಾರ್ಡನ್ ಹಾಲ್‍ನಲ್ಲಿ ಸಾರ್ವಜನಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರಿಗೆ 5 ವರ್ಷಗಳಲ್ಲಿ ಸಾಕಷ್ಟು ತೊಂದರೆ ನೀಡಿದೆ. ಎಲ್ಲಾ ಸಮುದಾಯದವರು ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಯನ್ನ ಬೆಂಬಲಿಸಬಾರದು ಎಂದರು.

ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ.ಬಿಜೆಪಿಗೆ ಮತ್ತೆ ಅಧಿಕಾರ ನೀಡಿದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವುದರಿಂದ ದೇಶದ ಹಿತದೃಷಿಯಿಂದ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾದ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು.

ಬಿಜೆಪಿ ಸರ್ಕಾರದಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ನೋಟು ಅಮಾನ್ಯಿಕರಣ, ಜಿಎಸ್‍ಟಿ, ಅಡುಗೆ ಅನಿಲ ಬೆಲೆ ಹೆಚ್ಚಳ ಇತ್ಯಾದಿ ಮೂಲ ಅವಶ್ಯಕತೆಗಳ ಬೆಲೆ ಹೆಚ್ಚಳದಿಂದ ಜನರು ರೋಸಿಹೋಗಿದ್ದಾರೆ. ಬಿಜೆಪಿ ಕೇವಲ ಸುಳ್ಳು ಭರವಸೆ ನೀಡುವುದರಲ್ಲಿ 5 ವರ್ಷ ಕಾಲಹರಣ ಮಾಡಿದೆ ಅದು ಹೇಳಿದಂತೆ ನಡೆದಿಲ್ಲ.

ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಬಡವರ ಖಾತೆಗೆ ಹಣ ಹಾಕಲಾಗುವುದು ಎಂದು ಹೇಳಲಾಗಿತ್ತು.ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಠಿಸುವುದು. ರೈತರ ಸಾಲ ಮನ್ನಾ ಸೇರಿದಂತೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಸಂಗತಿಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಲೋಕಸಭಾದ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ, ಪ್ರಕಾಶ ಘಾಟಗೆ, ಹೇಮಂತ ಗುರ್ಲಹೂಸೂರ, ರಾಬರ್ಟ ದದ್ದಾಪುರಿ, ರಘ ಲಕ್ಕಣ್ಣವರ, ಸುಭಾಸ ಶಿಂಧೆ, ದಾನಪ್ಪ ಕಬ್ಬೇರ, ಶಾಂತಮ್ಮ ಗುಜ್ಜಳ, ಬಸವರಾಜ ಮಲಕಾರಿ, ಸ್ವಾತಿ ಮಾಳಗಿ, ಆನಂದ ಸಿಂಗನಾಥ, ಆನಂದ ಮುಶನ್ನವರ, ಯಾಶಿನ ಹಾವೇರಿಪೇಟ್, ಪ್ರಕಾಶ ಪವಾರ, ಶಿವಶಂಕರ ಹಪ್ಪನ್ನವರ, ಶೈಲಾ ಕಾಮರೆಡ್ಡಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ