ಕಾಂಗ್ರೇಸ್ ಪ್ರಣಾಳಿಕೆ ಟೀಕೆ ಮಾಡಲು ರಾಜೀವ ಕುಮಾರ ಯಾರು-ಎಚ್.ಕೆ.ಪಾಟೀಲ್

ಹುಬ್ಬಳ್ಳಿ,ಏ.17-ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಲು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ ಯಾರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರಣಾಳಿಕೆ ಜನಪರವಾಗಿದ್ದು, ಮಹತ್ವದ ಅಂಶಗಳನ್ನು ಒಳಗೊಂಡಿದೆ. ಇದನ್ನು ನೋಡಿ ಜನ ಬದಲಾವಣೆ ಬಯಸುತ್ತಿದ್ದಾರೆ. ಆದರೆ ನೀತಿ ಆಯೋಗದ ಸ್ಥಾನವನ್ನು ರಾಜೀವ್ ಕುಮಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಒಬ್ಬ ಮೇಧಾವಿ ವ್ಯಕ್ತಿ, ಆದರೆ ವಿಚಿತ್ರ ಪ್ರವೃತ್ತಿಯ ಮನುಷ್ಯ ಆಗಿದ್ದು, ರಾಷ್ಟ್ರದಲ್ಲಿ ಯೋಧರ ಹೆಸರನ್ನು ಬಳಸಿ ರಾಜಕೀಯ ಮಾಡಿದವರು. ಈವರೆಗೂ ಯಾರು ಯೋಧರನ್ನು ರಾಜಕೀಯಕ್ಕೆ ಬಳಸಿರಲಿಲ್ಲ. ಸುಪ್ರೀಂ ಕೋರ್ಟ್ ಯೋಗಿ ಆದಿತ್ಯನಾಥ್ ಅವರಿಗೆ ಛೀಮಾರಿ ಹಾಕಿದರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡದೇ ಅಧಿಕಾರದಲ್ಲಿ ಇದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಈ ಮೂಲಕ ಯೋಗಿ ನರೇಂದ್ರ ಮೋದಿ ಪರ ಪ್ರಚಾರ ಮಾಡುವ ಮೂಲಕ ಸಂವಿಧಾನ ಹುದ್ದೆಗೆ ಅಪಮಾನ ಮಾಡಿದ್ದಾರೆ. ಅವರು ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವವರು. ಇಂತಹ ವ್ಯಕ್ತಿಗಳಿಂದ ಚುನಾವಣಾ ಪ್ರಕ್ರಿಯೆ ಪವಿತ್ರವಾಗಿ ಉಳಿಯಬೇಕಾದರೆ ರಾಷ್ಟ್ರಪತಿಗಳು, ರಾಜ್ಯಪಾಲರ ಮೇಲೆ ಕ್ರಮತೆಗೆದುಕೊಳ್ಳಬೇಕು ಎಂದು ಹರಿಹಾಯ್ದರು.

ನರೇಂದ್ರ ಮೋದಿ ಕ್ಷಮೆ ಕೇಳಬೇಕು:
ನರೇಂದ್ರ ಮೋದಿಯವರು ಕಾನೂನು ಬಾಹಿರವಾಗಿ ಭಾರತೀಯ ಯೋಧರ ಸಮವಸ್ತ್ರ ಧರಿಸಿದ್ದಾರೆ. ಈ ಮೂಲಕ ದೇಶಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಜನತೆಯಲ್ಲಿ ಕ್ಷಮೆ ಕೇಳಬೇಕು. ಕ್ಷಮೆಯಾಚಿಸದೇ ಹೋದರೆ ಚುನಾವಣೆ ಆಯೋಗ ನರೇಂದ್ರ ಮೋದಿಯವರನ್ನು ಚುನಾವಣೆ ಪ್ರಕ್ರಿಯೆಯಿಂದ ಅನರ್ಹಗೊಳಿಸಬೇಕು.

ಅವರು ಲೋಕಸಭೆ ಚುನವಣೆಗಾಗಿ ವಿದೇಶದಿಂದ ಮೂರು ಲಕ್ಷ ಕೋಟಿ ಹಣವನ್ನು ಮೂರು ಹೆಲಿಕಾಪ್ಟರ್ ಮೂಲಕ ರವಾನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಸೂಕ್ತ ತನಿಖೆ ನಡೆಯಬೇಕು ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ