ಸಿ.ಎಂ.ಕುಮಾರಸ್ವಾಮಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಅಧಿಕಾರಿಗಳು

ಶಿವಮೊಗ್ಗ, ಏ.17-ಚುನಾವಣಾ ಪ್ರಚಾರಕ್ಕೆ ಆಗಮಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಸಿದ ಹೆಲಿಕಾಪ್ಟರ್‍ನ್ನು ಚುನಾವಣಾ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಪರವಾಗಿ ಸೊರಬದಲ್ಲಿ ಬಹಿರಂಗ ಪ್ರಚಾರಕ್ಕೆ ಕುಮಾರಸ್ವಾಮಿ ಹೆಲಿಕಾಪ್ಟರ್‍ನಲ್ಲಿ ಆಗಮಿಸಿದ್ದರು.

ಸೊರಬದ ಅನವಟ್ಟಿ ಹೆಲಿಪ್ಯಾಡ್‍ನಲ್ಲಿ ಕುಮಾರಸ್ವಾಮಿಯವರು ಇಳಿದು ಹೆಲಿಕಾಪ್ಟರ್‍ನಿಂದ ಹೊರಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್‍ನಲ್ಲಿದ್ದ ಬ್ಯಾಗ್‍ಗಳು, ಸೀಟ್‍ಗಳು ಹಾಗೂ ಇತರ ವಸ್ತುಗಳನ್ನು ಸಮಗ್ರ ತಪಾಸಣೆಗೆ ಒಳಪಡಿಸಿದರು.

ಸುಮಾರು 20 ನಿಮಿಷ ಕಾಲ ಈ ಶೋಧ ಕಾರ್ಯ ನಡೆಯಿತು. ನಂತರ ಹೆಲಿಕಾಪ್ಟರ್‍ನ್ನು ಕುಮಾರಸ್ವಾಮಿಯವರ ಪ್ರಯಾಣಕ್ಕೆ ಬಿಟ್ಟುಕೊಡಲಾಯಿತು.

ನಂತರ ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಈ ಬಾರಿ ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ. ಕಳೆದ ಬಾರಿ ಉಪಚುನಾವಣೆಯ ವೇಳೆಯಲ್ಲೇ ಬಿಜೆಪಿ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ. ಸೋಲು ಕಟ್ಟಿಟ್ಟ ಬುತ್ತಿ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಕಣ್ಣೀರು ಹಾಕುವ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಭಾವನೆಗಳಿರುವವರಿಗೆ ಕಣ್ಣೀರು ಬರುತ್ತದೆ. ಕಲ್ಲು ಹೃದಯದವರಿಗೆ ಕಣ್ಣೀರು ಬರುವುದಿಲ್ಲ. ನಾನು ಭಾವನಾಜೀವಿ ಕಣ್ಣೀರು ಸಹಜ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ