ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ-ಚುನಾವಣಾಧಿಕಾರಿ ಡಾ.ಜಾಫರ್

ಮಂಡ್ಯ, ಏ.16- ಈ ಬಾರಿಯ ಲೋಕಸಭೆ ಚುನಾಣೆಗೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಾ.ಜಾಫರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಪ್ರಕ್ರಿಯೆಗೆ ತಯಾರಿ ನಡೆದಿದ್ದು, ಪರಿಷ್ಕರಣೆಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 17,12,012 ಮತದಾರರಿದ್ದಾರೆ. 8,54,758 ಪುರುಷ ಮತದಾರರಿದ್ದು, 8,56,285 ಮಹಿಳಾ ಮತದಾರರಿದಾರೆ. ಇತರೆ 157 ಮತದಾರರಿದ್ದು, 822 ಸೇವಾ ಮತದಾರರಿದ್ದಾರೆ ಎಂದು ವಿವರಿಸಿದರು.

ಈ ಬಾರಿಯ ಚುನಾವಣಾ ಕಣದಲ್ಲಿ 18 ಪುರುಷರು, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 22 ಅಭ್ಯರ್ಥಿಗಳಿದ್ದಾರೆ. ಪ್ರತಿ ಮತಗಟ್ಟೆಗೆ ಎರಡು ಮತಯಂತ್ರಗಳನ್ನು ಅಳವಡಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕುವಾರು ಮತಗಟ್ಟೆ ವಿವರ:
ಕೆ.ಆರ್.ನಗರ-252, ಕೆ.ಆರ್.ಪೇಟೆ-258, ಶ್ರೀರಂಗಪಟ್ಟಣ-249, ಮಳವಳ್ಳಿ-268, ಮದ್ದೂರು-253, ಮೇಲುಕೋಟೆ-251, ಮಂಡ್ಯ-258, ನಾಗಮಂಗಲ-257 ಮತಗಟ್ಟೆಗಳನು ಸ್ಥಾಪಿಸಲಾಗಿದೆ ಎಂದರು.

ನಗರ ಪ್ರದೇಶಗಳಲ್ಲಿ 295 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1751 ಮತಗಟ್ಟೆಗಳನ್ನು ತೆರೆಯಲಾಗಿದೆ. ಅಲ್ಲದೆ, 4,739 ಬ್ಯಾಲೆಟ್ ಯೂನಿಟ್, 2489 ಕಂಟ್ರೋಲ್ ಯೂನಿಟ್, 2803 ವಿವಿ ಪ್ಯಾಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಹನ್ನೆರಡು ಸಾವಿರ ಸಿಬ್ಬಂದಿಯನ್ನು ಮತದಾನ ದಿನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷ ಅಧಿಕಾರಿ, ಒಬ್ಬರು ಸಹಾಯಕ ಅಧಿಕಾರಿ, ನಾಲ್ವರು ಮತದಾನ ಅಧಿಕಾರಿ ಹಾಗೂ ಒಬ್ಬರು ಡಿ ದರ್ಜೆ ನೌಕರರನ್ನು ನೇಮಕ ಮಾಡಲಾಗಿದೆ ಎಂದರು.

20 ಮಾದರಿ ಮತಟ್ಟೆಗಳು:
ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಕೆ.ಆರ್.ನಗರದಲ್ಲಿ ತಲಾ ಎರಡು ಮತ್ತು ಕೆ.ಆರ್.ಪೇಟೆಯಲ್ಲಿ ಆರು ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಅಲ್ಲದೆ, 30 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದೆಯಲ್ಲದೆ, 17 ವಿಕಲಚೇತನರಿಗಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಅಂಧ ಮತದಾರರಿಗಾಗಿ ಬ್ರೈಲ್ ಲಿಪಿಯಲ್ಲಿರುವ ಬ್ಯಾಲೆಟ್ ಪೇಪರ್, ದೃಷ್ಟಿದೋಷ ಹಾಗೂ ಹಿರಿಯ ವಯೋವೃದ್ಧರಿಗಾಗಿ ಭೂತ್ ಕನ್ನಡಿ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರನ್ನು ಮತಗಟ್ಟೆಗೆ ಕರೆತರಲು 461 ವಾಹನ ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ