ರಾಜ್ಯದಲ್ಲಿ ಮುಂದುವರೆದ ಐಟಿ ದಾಳಿ

ಬಳ್ಳಾರಿ,ಏ.10- ಚುನಾವಣೆಗೆ ಕೇವಲ 8 ದಿನ ಬಾಕಿ ಇದೆ. ಅಕ್ರಮ ಹಣ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರ ಆಪ್ತರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಇಂದು ಬೆಳಗ್ಗೆ ಚಿಕ್ಕೋಡಿಯಲ್ಲಿ ಸಂಸದ ಪ್ರಕಾಶ ಹುಕ್ಕೇರಿಯವರ ಆಪ್ತ, ಗುತ್ತಿಗೆದಾರ ಪ್ರಕಾಶ್ ವಂಟಮುತ್ತೆ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರ ಆಪ್ತರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಕ್ಷತ್ರ ಹೊಟೇಲ್‍ನಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ, ಮಾಜಿ ಸಚಿವ ಅನಿಲ್ ಲಾಡ್ ಆಪ್ತರು ವಾಸ್ತವ್ಯ ಹೂಡಿದ್ದರು.ಅವರ ರೂಮ್‍ಗಳ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿ ಸೇರಿದಂತೆ 6 ಮಂದಿ ಐಟಿ ಅಧಿಕಾರಿಗಳ ತಂಡ ಹೊಟೇಲ್‍ನ ಪ್ರತಿ ರೂಮ್‍ಗಳನ್ನು ಪರಿಶೀಲಿಸಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಐಟಿ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಹೊಟೇಲ್‍ಗೆ ಪ್ರವೇಶಿಸಲು ಮುಂದಾದರು.ಆದರೆ ಅವರನ್ನು ಒಳ ಬಿಡದೆ ವಾಪಸ್ ಕಳುಹಿಸಿ ಶೋಧ ಮುಂದುವರಿಸಿದರು.

ದಾಳಿ ವೇಳೆ ಮಾಜಿ ಸಚಿವ ಅನಿಲ್ ಲಾಡ್ ಕೂಡ ಹೊಟೇಲ್‍ನಲ್ಲೇ ತಂಗಿದ್ದರು.ಅವರ ರೂಮ್‍ಗಳನ್ನು ಸಹ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಹೋಟೆಲ್ ನಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ್ ಲಾಡ್, ನಾನು ಬೆಂಗಳೂರಿನಿಂದ ಕಾರ್ಯಕರ್ತರ ಸಭೆಗಾಗಿ ಬಂದಿದ್ದೇನೆ. ಐಟಿ ಅಧಿಕಾರಿಗಳು ಬಂದಾಗ ನಾನು ಬಾತ್ ರೂಮ್‍ನಲ್ಲಿದ್ದೆ, ನಮಗೆ ಹಣ ಇದೆ ಅಂತ ಮಾಹಿತಿ ಬಂದಿದೆ ಅಂತ ಅಧಿಕಾರಿಗಳು ಕೋಣೆಯನ್ನು ಪರಿಶೀಲನೆ ನಡೆಸಿದರು.ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿ ವಿಚಾರಣೆಗೆ ಬರಬೇಕು ಎಂದು ತಿಳಿಸಿದ್ದಾರೆ.ದಾಳಿಯಲ್ಲಿ ಬೆಂಗಳೂರು ಮತ್ತು ಬಳ್ಳಾರಿಯ ಐಟಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳಿದರು.

ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಉದ್ಯಮಿ ಶ್ರೀನಿವಾಸ ಸರ್ವಶೆಟ್ಟಿ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕೋಡಿಯ ಐಟಿ ಇಲಾಖೆಯ ಐದಕ್ಕೂ ಹೆಚ್ಚು ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ವಂಟೆಮುತ್ತೆ ಅವರ ಇಂದಿರಾನಗರದ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಈಗಾಗಲೇ ಮಂಡ್ಯ, ಶಿವಮೊಗ್ಗ, ಮೈಸೂರು, ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳು, ಉದ್ಯಮಿಗಳು, ಗುತ್ತಿಗೆದಾರರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.ದೇಶದ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ದಾಳಿ ಮುಂದುವರೆಸಿ ನೂರಾರು ಕೋಟಿ ರೂ.ಗಳನ್ನು ವಶಕ್ಕೆ ಪಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ