ಬಳ್ಳಾರಿ,ಏ.10- ಬಿಜೆಪಿ ಕಾರ್ಯಕರ್ತನೊಬ್ಬ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಆರೋಪಿ ಚಂದ್ರಶೇಖರ್(60) ವಿರುದ್ಧ ಪೋಕ್ಸೋ ಕಾಯ್ದೆಯಡಿ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇನಹಳ್ಳಿ ನಿವಾಸಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯನೂ ಆಗಿರುವ ಚಂದ್ರಶೇಖರ್ ಹಣದ ಆಮೀಷ ತೋರಿಸಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೀಗ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರ ಬೆಳಕಿಗೆ ಬಂದ ನಂತರ ಸಂತ್ರಸ್ತೆ ಬಾಲಕಿ ಮತ್ತು ಅತ್ಯಾಚಾರದ ಆರೋಪದ ವ್ಯಕ್ತಿಯ ಮಧ್ಯೆ ಕೆಲವು ಸಮುದಾಯದ ಮುಖಂಡರು ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ.
ಆದರೆ ಸಂಧಾನಕ್ಕೆ ಒಪ್ಪದ ಸಂತ್ರಸ್ತೆ ಪೋಷಕರು ಆರೋಪಿ ಚಂದ್ರಶೇಖರ್ ವಿರುದ್ಧ ದೂರು ನೀಡುತ್ತಿದ್ದಂತೆ, ಆತ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಇತ್ತ ಸಂತ್ರಸ್ತ ಬಾಲಕಿ ಹೊಸಪೇಟೆ ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ಉಪ ಕೇಂದ್ರದ ಆಶ್ರಯದಲ್ಲಿದ್ದಾಳೆ.
ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿ ಚಂದ್ರಶೇಖರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಗೊಂಡು ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.