ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ ಸಿ.ಎಂ.ಕುಮಾರಸ್ವಾಮಿ

ಮಂಗಳೂರು, ಏ.7- ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಭದಲ್ಲಿದ್ದ ಕರಾವಳಿ ಮೂಲದ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದ್ದಾರೆ, ಮಂಗಳೂರಿನ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದ್ದಾರೆ.ಇದು ಕರಾವಳಿ ಜನರ ಸ್ವಾಭಿಮಾನದ ಪ್ರಶ್ನೆ.ಇನ್ಯಾವ ಕಾರಣಕ್ಕಾಗಿ ಮೋದಿಗೆ ಜನ ವೋಟು ಹಾಕಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕರಾವಳಿ ಭಾಗದಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರವಾಗಿ ಪ್ರಚಾರ ನಡೆಸಲು ಮಂಗಳೂರಿಗೆ ಆಗಮಿಸಿದ ಕುಮಾರಸ್ವಾಮಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ಮಂಗಳೂರಿಗೆ ಮೋದಿಯವರ ಕೊಡುಗೆ ಏನು?ಈ ಭಾಗದ ಅಭಿವೃದ್ದಿಗೆ ಅವರು ಯಾವುದೇ ನೆರವು ನೀಡಿಲ್ಲ. ಆದರೂ ಮೋದಿಯವರಿಗೆ ವೋಟು ಹಾಕಬೇಕೆಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ವಿಜಯಾ ಬ್ಯಾಂಕನ್ನು ಖಾಸಗೀಕರಣಗೊಳಿಸಿದ್ದು ಯಾವ ಕಾರಣಕ್ಕೆ? ಆ ಬ್ಯಾಂಕೇನು ನಷ್ಟದಲ್ಲಿತ್ತಾ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಏ.13 ರಂದು ಮಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಅದೇ ದಿನ ಪ್ರಧಾನಿ ಮೋದಿಯವರು ಬರುತ್ತಿರುವುದರಿಂದ ಕ್ಲ್ಯಾಷ್ ಆಗಬಾರದು ಎಂಬ ಕಾರಣಕ್ಕಾಗಿ ರಾಹುಲ್ ಅವರ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದೊಂದು ದಿನ ರಾಹುಲ್‍ಗಾಂಧಿ ಕರಾವಳಿ ಭಾಗಕ್ಕೆ ಬಂದು ಪ್ರಚಾರ ನಡೆಸಲಿದ್ದಾರೆ ಎಂದರು.

ಮೋದಿಯವರು ಮಂಗಳೂರಿಗೆ ಬಂದು ಯಾವ ಸಂದೇಶ ಕೊಡುತ್ತಾರೋ ಗೊತ್ತಿಲ್ಲ, ವಿಜಯಾ ಬ್ಯಾಂಕ್ ಮುಚ್ಚಿದ್ದಕ್ಕಾಗಿ ಕಾರಣ ಕೊಡುತ್ತಾರಾ, ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣವನ್ನು ಸಮರ್ಥಿಸಿಕೊಳ್ಳುತ್ತಾರಾ ಎಂದು ಕಾದು ನೋಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮಿತ್ರಕೂಟ ಈ ಬಾರಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಚಿಕ್ಕಮಗಳೂರು-ಉಡುಪಿ, ಉತ್ತರ ಕನ್ನಡ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕು. ಅದಕ್ಕಾಗಿ ಎರಡೂ ಪಕ್ಷಗಳ ಮುಖಂಡರು ಕುಳಿತು ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಮಂಡ್ಯಲೋಕಸಭೆ ಚುನಾವಣೆ ಬಗ್ಗೆ ಮೇ 23 ರಂದು ಮಾತನಾಡುತ್ತೇನೆ. ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದರ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ.

ಮಾಧ್ಯಮದವರಿಗೆ ಸಂಶಯವಿದೆ. ವಿರೋಧ ಪಕ್ಷಗಳಿಗಿಂತಲೂ ಹೆಚ್ಚಾಗಿ ಮಾಧ್ಯಮದವರೇ ಒದ್ದಾಡುತ್ತಿದ್ದಾರೆ. ಜೆಡಿಎಸ್ ಸೋಲಿಸಲು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಆದರೆ ಮಂಡ್ಯ ಜನರ ಮುಂದೆ ಇದೆಲ್ಲ ನಡೆಯುವುದಿಲ್ಲ ಎಂದರು.

ನನ್ನ ಮತ್ತು ನನ್ನ ಪುತ್ರನ ವಿರುದ್ಧವಾಗಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ನಿಖಿಲ್‍ಗೆ ಜನಬೆಂಬಲವಿದೆ. ಮಾಧ್ಯಮಗಳು ಏನೇ ಅಪಪ್ರಚಾರ ಮಾಡಿದರೂ ಅದು ಫಲ ನೀಡುವುದಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಮೈತ್ರಿ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯ ತೊಂದರೆ ಕೊಡಲಾಗುತ್ತಿದೆ. ಹಿಂದಿನ ಘಟನೆಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡರೆ ಇದು ಎಲ್ಲರಿಗೂ ಅರ್ಥವಾಗುತ್ತದೆ. ಅಪಪ್ರಚಾರದ ಮೂಲಕ ಜನರ ಮನಸ್ಸನ್ನು ಬೇರೆಡೆ ಸೆಳೆಯಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಜನಬೆಂಬಲ ಎಂದಿಗೂ ನಮ್ಮ ಪರವಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ