ಜೆಡಿಎಸ್-ಕಾಂಗ್ರೇಸ್ ನಾಯಕರುಗಳಿಗೆ ಮೋದಿ ಟೀಕೆ ಮಾಡುವುದೇ ಕಾಯಕ-ಬಿಜೆಪಿ ಮುಖಂಡ ಸಿ.ಟಿ.ರವಿ

ಬೆಂಗಳೂರು, ಏ.3-ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ ಎಂದು ಬಿಜೆಪಿ ಪಂಥಾಹ್ವಾನ ನೀಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರು ಕೇವಲ ಬಿಜೆಪಿ ಮತ್ತು ಮೋದಿ ಅವರನ್ನು ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸಲು ಯಾವ ವಿಷಯಗಳು ಸಿಗದಿರುವುದರಿಂದ ಹತಾಶರಾಗಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಪಕ್ಷದ ವಕ್ತಾರ ಎ.ಎಚ್.ಆನಂದ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಮತ್ತು ಮೋದಿ ಅವರನ್ನು ಟೀಕಿಸುವ ಮೂಲಕವೇ ಪ್ರಚಾರ ಪಡೆಯಬಹುದೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕೇಂದ್ರ ಸರ್ಕಾರದ ಯಾವ ಹಗರಣಗಳು ಇಲ್ಲದಿರುವುದರಿಂದ ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಏನೇ ಕಸರತ್ತು ನಡೆಸಿದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಮನವರಿಕೆ ಆಗಿರುವುದರಿಂದ ಬಿಜೆಪಿ ಮೇಲೆ ವೃಥಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಕಾಶ, ನೆಲಜಲ ಎಂದು ಭ್ರಷ್ಟಾಚಾರದ ಗಂಗೋತ್ರಿಯೇ ನಡೆಸಿತ್ತು. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲೂ ಕಾಂಗ್ರೆಸ್ ನಾಯಕರ ನಡವಳಿಕೆ ಜನರಲ್ಲಿ ಹೇಸಿಗೆ ಹುಟ್ಟಿಸಿತ್ತು. ದೇಶಕ್ಕೆ ಮೋದಿಯವರಂತಹ ಬಲಿಷ್ಠ ನಾಯಕತ್ವ ಅಗತ್ಯವಿದೆ ಎಂದು ಮನಗಂಡಿರುವ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

2014ರ ಚುನಾವಣೆಯಲ್ಲಿ ನಾವು ದೇಶದ ಜನತೆಗೆ ಯಾವ ಭರವಸೆಗಳನ್ನು ನೀಡಿದ್ದೆವೋ ಅದನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಸುರಕ್ಷತೆ, ಭದ್ರತೆ, ಮಹಿಳೆಯರ ರಕ್ಷಣೆ, ಮೂಲಭೂತ ಸೌಕರ್ಯಗಳ ಅಭಿವೃದ್ದಿ, ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಹೊಂದಾಣಿಕೆ, ಭಾರತದ ಘನತೆಯನ್ನು ವಿಶ್ವಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಅದನ್ನು ನರೇಂದ್ರಮೋದಿ ಅವರು ಈಡೇರಿಸುವಲ್ಲಿ ಪ್ರಾಮಾಣಿಕರಾಗಿದ್ದಾರೆ ಎಂದರು.

ಮೋದಿ ಪ್ರಧಾನಿಯಾದರೆ ದೇಶ ಅಲ್ಲೋಲ ಕಲ್ಲೋಲವಾಗುತ್ತದೆ ಎಂದು ಕೆಲವು ಸ್ವಯಂಘೋಷಿತ ಬುದ್ದಿಜೀವಿಗಳು ಸುಳ್ಳು ಆರೋಪ ಮಾಡಿದ್ದರು. ಆದರೆ ಇಡೀ ವಿಶ್ವವೇ ಮೆಚ್ಚುವಂತಹ ಆಡಳಿತವನ್ನು ಮೋದಿ ನೀಡಿದ್ದಾರೆ ಎಂದರು.

ಯಾರ ಕಾಲದಲ್ಲಿ ಭಾರತ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತೋ ಇಂದು ಮೋದಿ ನಾಯಕತ್ವದಲ್ಲಿ ದೇಶ ತಲೆ ಎತ್ತಿ ನಿಲ್ಲುವಂತಾಗಿದೆ ಎಂದು ಪ್ರಶಂಸಿಸಿದರು.

ಈ ಚುನಾವಣೆ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ, ದಕ್ಷ ನಾಯಕತ್ವದ ಮೇಲೆ ನಡೆಯುತ್ತದೆ. ನರೇಂದ್ರಮೋದಿಯಂತಹ ಪ್ರಬಲ ನಾಯಕರು ನಮ್ಮಲ್ಲಿದ್ದಾರೆ.ಚುನಾವಣೆ ಮುನ್ನವೇ ಮಹಾಘಟಬಂಧನ್ ಹರಿದುಹಂಚಿಹೋಗಿದೆ. ಮೋದಿ ಮುಂದೆ ನಿಮ್ಮ ನಾಯಕ ಯಾರು ಎಂದು ಪ್ರಶ್ನಿಸಿದರು.

ಮಹಾಘಟ್‍ಬಂಧನಲ್ಲಿ ಇರುವವರೇ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನುಒಪ್ಪುತ್ತಿಲ್ಲ. ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 2 ಸ್ಥಾನಗಳನ್ನು ಕಾಂಗ್ರೆಸ್‍ಗೆ ಕೊಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಒಂದೇ ಒಂದು ಸ್ಥಾನವನ್ನೂ ಸಹ ಬಿಟ್ಟುಕೊಡಲಿಲ್ಲ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸುತ್ತಿದ್ದೇವೆ ಎಂದು ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರೂ ಹಾವು-ಮುಂಗೂಸಿಯಂತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ