ರಾಜ್ಯದ ಅಭಿವೃದ್ಧಿ ಬಗ್ಗೆ ಬಿಜೆಪಿಯವರಿಗೆ ಕಾಳಜಿಯಿಲ್ಲ-ಸಿ.ಎಂ.ಕುಮಾರಸ್ವಾಮಿ

ಹಾಸನ/ಅರಸೀಕೆರೆ ಏ.3- ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ರಾಜ್ಯದ ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಹಾಗಾಗಿ ಹತಾಶರಾಗಿರುವ ಬಿಜೆಪಿಯವರು ತಮ್ಮ ಉಳಿವಿಗಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ.ಇದಕ್ಕೆಲ್ಲ ಜನತೆಯೇ ಪಾಠ ಕಲಿಸಲಿದ್ದಾರೆ ಎಂದರು.

ಮಂಡ್ಯ ಸೇರಿದಂತೆ ರಾಜ್ಯದ ಯಾವುದೇ ಭಾಗದ ಜನರಿರಬಹುದು.ಅವರೆಲ್ಲರೂ ಅಭಿವೃದ್ಧಿ ಪರವಾಗಿದ್ದಾರೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯವರು ಕೇಂದ್ರ ಸರ್ಕಾರದಿಂದ ನಮಗೆ ಹೆಲಿಕಾಪ್ಟರ್ ಕೂಡ ಸಿಗದಂತೆ ಮಾಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಹೆಲಿಕಾಪ್ಟರ್ ದೊರೆಯದ ಕಾರಣ ಶಿವಮೊಗ್ಗಕ್ಕೆ ಕಾರಿನಲ್ಲಿ ತೆರಳಬೇಕಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸಕ್ತ ಲೋಕಸಭೆ ಚುನಾವಣೆ ಸುಲಭವಾಗಿಲ್ಲ ಎಂದರು.

ಪ್ರಾದೇಶಿಕ ಪಕ್ಷಗಳನ್ನು ಟೀಕೆ ಮಾಡುವ ಅವರು 13 ಪಕ್ಷಗಳನ್ನು ಜೊತೆಗೂಡಿಸಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ರೈತರು ಸಾಕಷ್ಟು ನೊಂದಿದ್ದಾರೆ. ತೃತೀಯ ರಂಗದವರು ಪ್ರಧಾನಿಯಾದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತನ್ನು ಕೇಳುತ್ತಾರೆ. ಆಗ ನಮ್ಮ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಜಾತಿ ವ್ಯಾಮೋಹದಲ್ಲಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ಬೇರೆ ಕಡೆ ದಾಳಿ ಏಕಿಲ್ಲ: ಆದಾಯ ತೆರಿಗೆ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ ಗುತ್ತಿಗೆದಾರರಿದ್ದಾರೆಯೇ? ರಾಜ್ಯದೆಲ್ಲೆಡೆ ಗುತ್ತಿಗೆದಾರರು ಇಲ್ಲವೇ? ಬೇರೆ ಕಡೆ ದಾಳಿಯಾಗದೆ ಇಲ್ಲಿ ಮಾತ್ರ ಏಕೆ ದಾಳಿಯಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಜೋಡೆತ್ತುಗಳು ಪ್ರತಿದಿನವೂ ಸಿನಿಮಾ ಶೂಟಿಂಗ್‍ನಲ್ಲಿ ಇರುತ್ತಿದ್ದರು.ಚುನಾವಣಾ ಸಂದರ್ಭದಲ್ಲಿ ಸ್ವಲ್ಪ ಕಷ್ಟ ಪಡಲಿ ಬಿಡಿ ಎಂದು ಚಿತ್ರ ನಟರಾದ ಯಶ್ ಮತ್ತು ದರ್ಶನ್ ಅವರೇ ಹೆಸರು ಉಲ್ಲೇಖಿಸದೆ ಮಾತನಾಡಿದರು.

ಬಿಸಿಲಲ್ಲಿ ರೈತರು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಅವರಿಗೂ ಅರಿವಾಗಲಿ.ಆಗ ಕಷ್ಟ-ಸುಖ ಏನೆಂಬುದು ಅರ್ಥವಾಗುತ್ತದೆ. ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಮಾಧ್ಯಮದಲ್ಲಿ ಪ್ರತಿದಿನವೂ ಬಿಂಬಿಸಲಾಗುತ್ತಿದೆ.ಇದರಿಂದ ರಾಜ್ಯದಲ್ಲಿ ಬಂಡವಾಳ ಹೂಡಲು ಯಾರು ಮುಂದೆ ಬರುತ್ತಾರೆ. ಹೇಗೆ ಅಭಿವೃದ್ಧಿಯಾಗುತ್ತದೆ ಎಂದು ಪ್ರಶ್ನಿಸಿದರು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರವೂ ಅಗತ್ಯ ಎಂದರು.

ಹಾಸನದಲ್ಲಿ ಜೆಡಿಎಸ್ ಗೆದ್ದರೆ 50 ವರ್ಷ ಗುಲಾಮಗಿರಿ ಎಂಬ ಹೇಳಿಕೆ ನೀಡಿದ್ದ ಶಾಸಕ ಪ್ರೀತಮ್‍ಗೌಡ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ನಮ್ಮ ಅಭ್ಯರ್ಥಿ ಗೆದ್ದರೆ ಅವರಿಗೆ ರಾಜಕೀಯದಲ್ಲಿ ನೆಲೆ ಇರುವುದಿಲ್ಲ. ಅದಕ್ಕಾಗಿ ಆ ರೀತಿ ಹೇಳಿದ್ದಾರೆ ಎಂದರು.

ಶಾಸಕರು ಹಾಸನದ ಅಭಿವೃದ್ಧಿ ಪರವಾಗಿ ಚಿಂತನೆ ಮಾಡುವುದಿಲ್ಲ. ಕೇವಲ ಸ್ವಾರ್ಥಕ್ಕಾಗಿ ಯೋಚನೆ ಮಾಡುವ ವ್ಯಕ್ತಿ. ಬಜೆಟ್‍ನಲ್ಲಿ ಹಾಸನಕ್ಕೆ ಯೋಜನೆ ಘೋಷಿಸಿದಾಗ ಬಿಜೆಪಿಯವರೇ ಟೀಕಿಸಿದ್ದರು. ಅಂದು ಸುಮ್ಮನಿದ್ದ ಶಾಸಕರಿಗೆ ಈಗ ಅಭಿವೃದ್ಧಿಯ ನೆನಪಾಯಿತೇ ಎಂದು ಟೀಕಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಶ್ರಮಿಸುತ್ತಿದ್ದು, ನಾವು ಪರಿಹಾರವನ್ನು ಒದಗಿಸುತ್ತೇವೆ. ಹೀಗಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದವಿದ್ದು, ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಮಂಡ್ಯ ಕ್ಷೇತ್ರದ ಚುನಾವಣೆ ತಮ್ಮ ವೈಯಕ್ತಿಕ ವಿಚಾರವಾಗಿದ್ದು, ಅಲ್ಲಿನ ಜನರೇ ನೋಡಿಕೊಳುತ್ತಾರೆ ಎಂದ ಮುಖ್ಯಮಂತ್ರಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ