ನವದೆಹಲಿ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್ ಸ್ಫೋಟಿಸುವ ವಿಫಲ ಪ್ರಯತ್ನವೊಂದು ನಡೆದಿತ್ತು. ಆತ್ಮಾಹುತಿ ದಾಳಿ ಮೂಲಕ ಸೈನಿಕರನ್ನು ಹತ್ಯೆ ಮಾಡಲು ಮುಂದಾಗಿದ್ದ ಉಗ್ರನನ್ನು ಪೊಲೀಸರು ಬಂಧಿಸಿದ್ದು, ಆತಂಕಕಾರಿ ವಿಚಾರವೊಂದನ್ನು ಹೇಳಿಕೊಂಡಿದ್ದಾನೆ.
ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್ಗೆ ಕಾರನ್ನು ಗುದ್ದಿಸುವುದು ಈತನ ಟಾಸ್ಕ್ ಆಗಿತ್ತು. ಅಷ್ಟೇ ಅಲ್ಲ, ಈ ವೇಳೆ ಆತನಿಗೆ ಕೊಟ್ಟಿದ್ದ ಮಷಿನ್ ಒಂದರ ಬಟನ್ ಒತ್ತಬೇಕಿತ್ತಂತೆ. “ಸೈನಿಕರು ಸಂಚಾರ ಮಾಡುತ್ತಿದ್ದ ವಾಹನ ಸ್ಫೋಟಿಸುವಂತೆ ನನಗೆ ದೂರವಾಣಿ ಮೂಲಕ ಆದೇಶ ಬಂತು. ಅವರು ನೀಡಿದ್ದ ಕಾರನ್ನು ತೆಗೆದುಕೊಂಡು ಹೋಗಿ ಬಸ್ಗೆ ಗುದ್ದುವುದು ನನ್ನ ಟಾಸ್ಕ್ ಆಗಿತ್ತು. ಅಂತೆಯೇ ಬಸ್ಗೆ ಕಾರನ್ನು ಗುದ್ದಲು ಪ್ರಯತ್ನಿಸಿದೆ. ಬಟನ್ ಕೂಡ ಒತ್ತಿದೆ,” ಎಂದಿದ್ದಾನೆ ಬಂಧಿತ ಉಗ್ರ ಓವೈಸ್ ಅಮಿನ್.
ಜವಾಹಾರ್ ಸುರಂಗದ ಸಮೀಪ ಕಾರು ಸ್ಫೋಟಗೊಂಡಿತ್ತು. ಸೈನಿಕರು ಸಂಚಾರ ಮಾಡುತ್ತಿದ್ದ ಬಸ್ ಹಾದು ಹೋದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿದೆ. ಹಾಗಾಗಿ, ಬಸ್ಗೆ ಜಾಸ್ತಿ ಹಾನಿ ಉಂಟಾಗಿಲ್ಲ. ಕಾರು ಸ್ಫೋಟಗೋಳ್ಳುವುದಕ್ಕೂ ಮೊದಲು ಉಗ್ರ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದ. ಹಾಗಾಗಿ, ಆತನನ್ನು ಬಂಧಿಸಲಾಗಿದೆ.
ಉಗ್ರನ ಬಳಿ ಇದ್ದ ದಾಖಲೆಗಳಿಂದ ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಪುಲ್ವಾಮಾದಲ್ಲಿ ನಡೆದ ದಾಳಿ ಮಾದರಿಯಲ್ಲೇ ಈ ದಾಳಿ ನಡೆಸುವುದು ಆತನ ಉದ್ದೇಶವಾಗಿತ್ತು.