ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಂತರ, ವಿಶೇಷ ರಾಜ್ಯದ ಸ್ಥಾನಮಾನವನ್ನು ತೆಗೆದುಹಾಕುವುದು ಸೂಕ್ತವಲ್ಲ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರಕ್ಕೆ ಸ್ವಾಯತ್ತೆ ನೀಡಲು ತಮ್ಮ ಪಕ್ಷ ಅವಿರತ ಶ್ರಮಿಸಲಿದ್ದು, ಪ್ರತ್ಯೇಕ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಒಮರ್ ಅಬ್ದುಲ್ಲಾ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚಿಗೆ ಜಮ್ಮು ಕಾಶ್ಮೀರದ ಬಂಡಿಪೋರದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಒಮರ್ ಅಬ್ದುಲ್ಲಾ, ‘ಸ್ವಾತಂತ್ರ್ಯದ ಬಳಿಕ ರಾಜಾಳ್ವಿಕೆ ಪ್ರದೇಶಗಳು ಯಾವುದೇ ಷರತ್ತುಗಳಿಲ್ಲದೆ ಭಾರತದ ಭಾಗವಾಗಿ ವಿಲೀನಗೊಂಡವು. ಆದರೆ, ಕಣಿವೆ ರಾಜ್ಯ ಮಾತ್ರ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿಯೇ ಉಳಿಸಿಕೊಳ್ಳುವ ಮತ್ತು ಪ್ರತ್ಯೇಕ ಸಂವಿಧಾನ ಹೊಂದುವ ಮೂಲಕ ವಿಲೀನವಾಯಿತು. ನಮಗೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿ ಇದ್ದರು. ಕಾಶ್ಮೀರಕ್ಕೆ ಸ್ವಾಯತ್ತೆ ನೀಡಲು ತಮ್ಮ ಪಕ್ಷ ಅವಿರತ ಶ್ರಮಿಸಲಿದ್ದು, ಪ್ರತ್ಯೇಕ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಯನ್ನು ಸೃಷ್ಟಿಸಲಾಗುವುದು. ನಾವು ಮತ್ತೆ ಪ್ರತ್ಯೇಕ ಪ್ರಧಾನಿಯನ್ನು ಪಡೆಯಲಿದ್ದೇವೆ ಎಂದು ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ಪಕ್ಷವನ್ನು ಮೋದಿ ಟೀಕಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಒಮರ್ ಅಬ್ದುಲ್ಲಾ ಅವರ ಈ ಹೇಳಿಕೆ ಬಗ್ಗೆ ಕಿಡಿಕಾರಿರುವ ಪ್ರಧಾನಿ ಮೋದಿ, ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯಿದ್ದ ಕಾಲ 1953ರ ದಶಕಕ್ಕೆ ಕಾಶ್ಮೀರದ ಜನರನ್ನು ಮತ್ತೆ ಕೊಂಡೊಯ್ಯಲು ಕಾಂಗ್ರೆಸ್ನ ಮಿತ್ರ ಪಕ್ಷ ನ್ಯಾಷನಲ್ ಕಾನ್ಫೆರೆನ್ಸ್ ಯತ್ನಿಸುತ್ತಿದೆ.
ಒಮರ್ ಹೇಳಿಕೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆಯೇ? ಈ ವಿಷಯವಾಗಿ ಮಹಾಘಟಬಂಧನದ ಮುಖಂಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.