ಪುಲ್ವಾಮಾ ಮಾದರಿ ದಾಳಿಗೆ ಯತ್ನಿಸಿದ್ದ ಹಿಜ್ಬುಲ್ ಉಗ್ರನ ಬಂಧನ

ಶ್ರೀನಗರ: ಪುಲ್ವಾಮಾ ಮಾದರಿಯ ಕಾರ್ ಬಾಂಬ್ ದಾಳಿ ನಡೆಸಲು ಯತ್ನಿಸಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಓವೈಸ್ ಅಹ್ಮದ್ ಬಂಧಿತ ಉಗ್ರ. ಈತ ಬಿಜ್ಬೆಹರಾ ನಿವಾಸಿಯಾಗಿದ್ದು ಹಿಜ್ಬುಲ್ ಮುಜಾಹಿದೀನಿ ಉಗ್ರ ಸಂಘಟನೆಗೆ ಸೇರಿದವನೆಂದು ಶಂಕಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ನಗರದಲ್ಲಿ ಶನಿವಾರ ಮುಂಜಾನೆ ಪುಲ್ವಾಮಾ ಮಾದರಿ ದಾಳಿ ನಡೆದಿತ್ತು. ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಮೀಪವೇ ಸ್ಯಾಂಟ್ರೋ ಕಾರೊಂದು ಸ್ಫೋಟಗೊಂಡಿತ್ತು. ಕಾರು ಹಿಂದಿನಿಂದ ಬಸ್‌ಗೆ ಗುದ್ದಿತ್ತಾದರೂ ಯಾವುದೇ ರೀತಿಯ ಅನಾಹುತ ಸಂಭವಿಸಿರಲಿಲ್ಲ. ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ಬಳಿಕ ಘಟನೆ ನಡೆದ ಸ್ಥಳದ ಸಮೀಪವೇ ಸುಸೈಡ್ ನೋಟ್ ಪತ್ತೆಯಾಗಿತ್ತು. ಬಳಿಕವಷ್ಟೇ ಇದು ಹಿಜ್ಬುಲ್ ಮುಜಾಹಿದೀನ ಸಂಘಟನೆಯವರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿ ಯತ್ನ ಎಂದು ತಿಳಿದುಬಂದಿತ್ತು.

ಘಟನೆ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಕಾರನ್ನು ಚಲಿಸುತ್ತಿದ್ದ ಬೆಂಗಾವಲು ವಾಹನದ ಕಡೆಗೆ ನ್ಯೂಟ್ರಲ್ ಗೇರ್ ಮೇಲಿಟ್ಟು ಆತ ಸ್ಥಳದಿಂದ ಓಡಿ ಹೋಗಿದ್ದ.

ಸಿಆರ್‌ಪಿಎಫ್‌ನ 10 ಬೆಂಗಾವಲು ವಾಹನಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಈ ಕೃತ್ಯವನ್ನು ನಡೆಸಲಾಗಿತ್ತು. ಸ್ಪೋಟದ ತೀವ್ರತೆ ಕಡಿಮೆ ಇದ್ದುದರಿಂದ ಜೀವಹಾನಿಯಾಗಿಲ್ಲ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಜನ ಸೈನಿಕರು ಹುತಾತ್ಮರಾಗಿದ್ದರು.

Jammu and Kashmir: Banihal car bomber apprehended

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ