ಖಾಸಗಿ ಬಸ್ ಮಾಲೀಕರು ನೀತಿ ಸಂಹಿತೆ ಉಲ್ಲಂಘಿಸಬಾರದು-ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಕೆ

ಬೆಂಗಳೂರು,ಏ.1- ಚುನಾವಣೆ ಸಂದರ್ಭದಲ್ಲಿ ಖಾಸಗಿ ಬಸ್‍ನವರು ಮತದಾನ ಮಾಡಲು ಜನರನ್ನು ಉಚಿತವಾಗಿ ಕರೆದೊಯ್ಯುತ್ತೇವೆ ಎಂದು ಹೇಳಿದರೆ ಅಂತಹ ಬಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಇಂದಿಲ್ಲಿ ಎಚ್ಚರಿಕೆ ನೀಡಿದರು.

ಖಾಸಗಿ ವಾಹನದವರು ಉಚಿತವಾಗಿ ಕರೆದೊಯ್ಯುತ್ತೇವೆ ಎಂದು ಹೇಳುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹಾಗಾಗಿ ಯಾವುದೇ ಕಾರಣಕ್ಕೂ ಮತದಾರರಿಗೆ ಪ್ರಚೋದನೆ ಅಥವಾ ಆಮೀಷ ನೀಡಬಾರದು ಎಂದು ಸುದ್ದಿಗೋಷ್ಠಿಯಲ್ಲಿಂದು ಆಯುಕ್ತರು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸುಮಾರು ಏಳು ಸಾವಿರ ಖಾಸಗಿ ಬಸ್‍ಗಳಿವೆ. ಯಾವುದೇ ಬಸ್ ಮಾಲೀಕರು ನೀತಿ ಸಂಹಿತೆ ಉಲ್ಲಂಘಿಸಬಾರದು. ಒಂದು ವೇಳೆ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸು ಹಾಕುತ್ತೇವೆ ಹಾಗೂ ಭಾರೀ ದಂಡ ವಿಧಿಸುತ್ತೇವೆ ಎಂದು ಹೇಳಿದರು.

ದಾಖಲೆ ಆದಾಯ ಸಂಗ್ರಹ:
ಸಾರಿಗೆ ಇಲಾಖೆ ಕಳೆದ 2017-18ನೇ ಸಾಲಿನಲ್ಲಿ 6156 ಕೋಟಿ ಆದಾಯ ಸಂಗ್ರಹಿಸಿತ್ತು.2018-19ರಲ್ಲಿ 6167 ಕೋಟಿ ಆದಾಯ ಸಂಗ್ರಹಣೆ ಗುರಿ ಹೊಂದಿದ್ದೆವು.ಗುರಿ ಮೀರಿ ನಮ್ಮ ಸಂಸ್ಥೆ ಸಾಧನೆ ಮಾಡಿ 6528 ಕೋಟಿ ರೂ.ಗಳ ದಾಖಲೆ ಆದಾಯ ಸಂಗ್ರಹಿಸಿದೆ ಎಂದು ಹೇಳಿದರು.

2017-18ರಲ್ಲಿ ರಾಜ್ಯಾದ್ಯಂತ 19384846 ವಾಹನ ನೋಂದಣಿ ಆಗಿತ್ತು. 2018-19ನೇ ಸಾಲಿನಲ್ಲಿ 2 ಕೋಟಿ 10 ಲಕ್ಷ ವಾಹನ ನೋಂದಣಿ ಆಗಿದೆ.ಬೆಂಗಳೂರು ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ 1877733 ವಾಹನಗಳನ್ನು ತಪಾಸಣೆ ಮಾಡಿ 160 ಕೋಟಿ ರೂ.ಆದಾಯ ಸಂಗ್ರಹ ಮಾಡಿದ್ದೇವೆ ಎಂದು ತಿಳಿಸಿದರು.

ನಗರದಲ್ಲಿ ಸುಮಾರು 81,45,947 ವಾಹನ ನೋಂದಣಿ ಆಗುತ್ತಿದೆ. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹಾಗಾದರೂ ವಾಹನ ನೋಂದಣಿ ನಿಲ್ಲಿಸಲು ಮೋಟಾರು ವಾಹನ ಕಾಯ್ದೆಯಡಿ ನಮಗೆ ಅವಕಾಶ ಇಲ್ಲ. ಇದರಿಂದಾಗಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರೋತ್ಸಾಹ ಕ್ರಮ ಕೈಗೊಳ್ಳುತ್ತೇವೆ ಎಂದರು.
ಚುನಾವಣೆ ಮುಗಿದ ಕೂಡಲೇ ಟು-ಸ್ಟ್ರೋಕ್ ವಾಹನಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಇದೇ ವೇಳೆ ಅವರು ಹೇಳಿದರು.

ಹೊಸ ವಾಹನಗಳಿಗೆ ಎಚ್‍ಎಸ್‍ಆರ್‍ಪಿ ಕಡ್ಡಾಯ:
ಇಂದಿನಿಂದ ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯ ಮಾಡಿದ್ದೇವೆ. ಯಾವುದೇ ವಾಹನ ಉತ್ಪಾದನಾ ಸಂಸ್ಥೆಗಳು ಹೊಸದಾಗಿ ತಯಾರಿಸುವ ವಾಹನಗಳಿಗೆ ಕಡ್ಡಾಯವಾಗಿ ಎಚ್‍ಎಸ್‍ಆರ್‍ಪಿ ಪ್ಲೇಟ್ ಅಳವಡಿಸಲೇಬೇಕು ಎಂದು ಇಕ್ಕೇರಿ ಹೇಳಿದರು.

ನಿನ್ನೆ ಮೊನ್ನೆ ಉತ್ಪಾದನೆಯಾಗಿರುವ ವಾಹನಗಳಿಗೆ ಎಚ್‍ಎಸ್‍ಆರ್‍ಪಿ ಪ್ಲೇಟ್ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಪುನರಾವರ್ತನೆಯಾದರೆ ಬ್ಯಾನ್:
ನಗರದಲ್ಲಿ ಬೈಕ್ ಟ್ಯಾಕ್ಸಿಗೆ ಅವಕಾಶವಿಲ್ಲ. ಆದರೂ ವೋಲಾ ಸಂಸ್ಥೆ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಮುಂದಾಗಿತ್ತು. ಹೀಗಾಗಿ 6 ತಿಂಗಳು ವೋಲಾ ಕ್ಯಾಬ್ ನಿಲ್ಲಿಸಲು ಸಾರಿಗೆ ಇಲಾಖೆ ತೀರ್ಮಾನ ಕೈಗೊಂಡಿತ್ತು. ಅದರೆ ವೋಲಾಸಂಸ್ಥೆಯವರು ಬಂದು ಕ್ಷಮೆ ಕೇಳಿ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಕೇಳಿಕೊಂಡರು. ಹಾಗಾಗಿ ದಂಡ ವಿಧಿಸಿ ವೋಲಾ ಕ್ಯಾಬ್ ಓಡಾಡಲು ಅವಕಾಶ ಕೊಟ್ಟಿದ್ದೇವೆ. ಭವಿಷ್ಯದಲ್ಲಿ ಇಂತಹ ತಪ್ಪು ಪುನರಾವರ್ತನೆಯಾದರೆ ವೋಲಾ ಕ್ಯಾಬ್‍ನ್ನು ಬ್ಯಾನ್ ಮಾಡಲು ಹಿಂದು ಮುಂದು ನೋಡುವುದಿಲ್ಲ ಎಂದು ಎಚ್ಚರಿಸಿದರು.

ನಗರದಲ್ಲಿ ಬೈಕ್ ಟ್ಯಾಕ್ಸಿ ಆರಂಭಕ್ಕೆ ಅನುಮತಿ ಇಲ್ಲ. ಆದರೆ ರೆಂಟಲ್(ಬಾಡಿಗೆ) ಬೈಕ್ ಸೇವೆಗೆ ಅವಕಾಶ ಇದೆ. ರ್ಯಾಪಿಡ್ ಎಂಬ ಸಂಸ್ಥೆ ಕಾನೂನು ಮೀರಿ ಬೈಕ್ ಟ್ಯಾಕ್ಸಿ ಸೇವೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆ ಸಂಸ್ಥೆ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ