ಕನಿಷ್ಟ ಪ್ರಚಾರದ ಭರಾಟೆಯೂ ಗೋಚರಿಸದ ಮೈಸೂರು-ಕೊಡಗು ಕ್ಷೇತ್ರ

ಮೈಸೂರು, ಏ.1- ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದರೂ ಪ್ರತಿಷ್ಠಿತ ಕಣವೆಂದೇ ಬಿಂಬಿತವಾಗಿದ್ದ ಮೈಸೂರು ಹಾಗೂ ಕೊಡಗು ಕ್ಷೇತ್ರದಲ್ಲಿ ಮಾತ್ರ ಚುನಾವಣೆ ಸಮೀಪಿಸುತ್ತಿದ್ದರೂ ಕನಿಷ್ಠ ಪ್ರಚಾರದ ಭರಾಟೆಯೂ ಗೋಚರಿಸುತ್ತಿಲ್ಲ.

ಇದೇ 18ರಂದು ಮತದಾನ ನಡೆಯುತ್ತಿದ್ದರೂ ಮೈಸೂರಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಪರ ಪ್ರಚಾರ ಕಳೆಗಟ್ಟುತ್ತಿಲ್ಲ. ಕಾಂಗ್ರೆಸ್‍ನ ಕಾರ್ಯಕರ್ತರು ಮಾತ್ರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳದೆ ಇರುವುದು ತಳಮಟ್ಟದ ಮೈತ್ರಿಗೆ ಕಾರ್ಯಕರ್ತರು ಯಾವುದೇ ರೀತಿಯಲ್ಲೂ ಸಹಕರಿಸುತ್ತಿಲ್ಲ.

ಪಕ್ಕದ ಮಂಡ್ಯದಲ್ಲಿ ಚುನಾವಣೆ ಕಣ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದರೂ ಮೈಸೂರಿನಲ್ಲಿ ಮಾತ್ರ ರಣೋತ್ಸಾಹ ಕಂಡುಬರುತ್ತಿಲ್ಲ. ಇಡೀ ಮೈಸೂರೇ ತಟಸ್ಥವಾದಂತೆ ಗೋಚರಿಸುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಫಲರಾಗಿರುವುದು ಜೆಡಿಎಸ್ ನಾಯಕರ ಮುನಿಸಿಗೆ ಕಾರಣವಾಗಿದೆ. ಹಾಗಾಗಿ ಸಚಿವರಾರೂ ಪ್ರಚಾರ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ.

ವಿಜಯಶಂಕರ್ ಗೆಲುವಿಗೆ ಸಹಕರಿಸಬೇಕು. ಕೋಮುವಾದಿ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು. ಹಾಗಾಗಿ ಎರಡೂ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕೆಂದು ಹಲವು ಬಾರಿ ನಾಯಕರು ಕರೆ ಕೊಟ್ಟಿದ್ದರೂ ಮೈಸೂರಿನಲ್ಲಿ ಈ ಹೇಳಿಕೆಗಳು ಯಾವುದೇ ಪರಿಣಾಮ ಬೀರುತ್ತಿಲ್ಲ.

ನಗರದಲ್ಲಂತೂ ಕಾಂಗ್ರೆಸ್‍ನವರು ಮಾತ್ರ ಚುನಾವಣೆ ಬಗ್ಗೆ ಆಸಕ್ತಿ ತಳೆದವರಂತೆ ಕಾಣುತ್ತಿದ್ದಾರೆ.ಇನ್ನು ಗ್ರಾಮೀಣ ಪ್ರದೇಶದಲ್ಲಿ ಚಿತ್ರಣ ಬೇರೆ ಏನೂ ಇಲ್ಲ.

ಮುಖಂಡರು ಬಂದಾಗ ಮಾತ್ರ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕಿಳಿಯುತ್ತಾರೆ.ಆದರೆ, ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಿಗೆ ಸೇರಿ ಮತ ಯಾಚಿಸುವುದು ವಿರಳವಾಗಿದೆ.

ಕೇವಲ 17 ದಿನಗಳು ಮಾತ್ರ ಬಾಕಿ ಇದ್ದರೂ ಕಾರ್ಯಕರ್ತರಲ್ಲಿ ಯಾವುದೇ ಉತ್ಸಾಹ ಕಾಣದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ