ಕಳೆದ ಐದು ವರ್ಷಗಳಲ್ಲಿ ಕೇವಲ 15 ಉದ್ಯಮಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡಿದೆ : ರಾಹುಲ್ ಗಾಂಧಿ

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರು, ಸಣ್ಣ ವ್ಯಾಪಾರಿಗಳಿಗೆ ಮತ್ತು ರೈತರಿಗಾಗಿ ಯಾವ ಯೋಜನೆಯನ್ನು ನೀಡಲಿಲ್ಲ. ಕೇವಲ 15 ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನೆಲಮಂಗಲದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರೈತರ ಸಾಲಮನ್ನಾ ಮಾಡಲು ಹಣ ಇಲ್ಲವೆಂದು ಹೇಳಿದ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, 15 ಉದ್ಯಮಿಗಳ ಮೂರುವರೆ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು ಎಂದರು.

ದೇಶದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ ಇಂತಹ ವ್ಯಕ್ತಿಗಳಿಗೆ ಹಣ ನೀಡಲು ಕೇಂದ್ರದ ಬಳಿ ಹಣವಿದೆ. ಆದ್ರೆ ದೇಶದ ರೈತರಿಗೆ, ಕೂಲಿಕಾರರಿಗೆ, ಶಿಕ್ಷಣ, ಆಸ್ಪತ್ರೆಯ ಅಭಿವೃದ್ಧಿಗಳಿಗೆ ಇವರ ಬಳಿ ಹಣ ಇಲ್ಲ ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿರುದ್ಧವೂ ಗುಡುಗಿದ ರಾಹು ಗಾಂಧಿ,ಕರ್ನಾಟಕದ ರೈತರು ಮತ್ತು ಸಾಮಾನ್ಯ ವರ್ಗದ ಜನರ ಜೇಬಿನಿಂದ ಹಣ ತೆಗೆದು ದೆಹಲಿಯ ಬಿಜೆಪಿ ನಾಯಕರಿಗೆ ಬಿ ಎಸ್ ಯಡಿಯೂರಪ್ಪ 1800 ಕೋಟಿ ನೀಡುತ್ತಾರೆ ಎಂದು ಡೈರಿ ಪ್ರಕರಣವನ್ನು ಪ್ರಸ್ತಾಪಿಸಿದರು.

2014ರ ಚುನಾವಣೆಗು ಮುನ್ನ ನರೇಂದ್ರ ಮೋದಿ ಎಲ್ಲರ ಖಾತೆಗೆ 15 ಲಕ್ಷ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಈ ವರೆಗೆ ಏನೂ ನೀಡಿಲ್ಲ. ಆದ್ರೆ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ಎಂದೂ ನೀಡಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ನ್ಯಾಯ’ ಯೋಜನೆಯ ಮೂಲಕ ದೇಶದ ಶೇ.20 ಭಾಗವಿರುವ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಹಣ ಹಾಕಲಿದೆ. ಈ ಯೋಜನೆಯಲ್ಲಿ 5 ಕೋಟಿ ಫಲಾನುಭವಿಗಳಿಗೆ ಸಿಗಲಿದೆ. ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ