ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯ ಚುನಾವಣಾಧಿಕಾರಿಗಳು

ಬೆಂಗಳೂರು, ಮಾ.31-ರಾಜ್ಯ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ರೇಖೆಗಳಲ್ಲಿ ಚುನಾವಣೆ-2019 ಪ್ರದರ್ಶನ ಹಾಗೂ ಮತದಾರರ ಜಾಗೃತಿ ಅಭಿಯಾನಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಚಾಲನೆ ನೀಡಿದರು.

ಭಾರತ ಚುನಾವಣಾ ಆಯೋಗದ ಆಶಯದಂತೆ ವಿಶ್ವವಿಖ್ಯಾತ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಇಂದು ಬೆಳಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವ್‍ಕುಮಾರ್, ಬೆಂಗಳೂರಿನ ನಾಗರಿಕರು ಕ್ರಿಯಾಶೀಲರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಬೇಕು ಎಂದು ಕರೆ ಕೊಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಈ ವಿನೂತನ ಕಾರ್ಯಕ್ರಮ ಬೆಂಗಳೂರಿಗರ ಮನಸೆಳೆದು ಮತದಾನದ ಪ್ರಮಾಣ ಹೆಚ್ಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಮಾದರಿ ನೀತಿ-ಸಂಹಿತೆ ಉಲ್ಲಂಘನೆ, ಅಕ್ರಮಗಳಿಗೆ ಸಂಬಂಧಿಸಿದಂತೆ ನಾಗರಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡಬೇಕು. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ನಾಗರಿಕರ ಸಹಕಾರವೂ ಅಗತ್ಯ ಎಂದರು.

ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಮಾತನಾಡಿ, ಬೆಂಗಳೂರಿಗರು ಆಮಿಷಕ್ಕೆ ಒಳಗಾಗುವುದಿಲ್ಲ. ಆದರೆ, ಮತದಾನದಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು.ಮತದಾನದ ಕರ್ತವ್ಯ ಮತ್ತು ಜವಾಬ್ದಾರಿ ಅರಿತು ಚುನಾವಣೆಯಲ್ಲಿ ಮತದಾನ ಮಾಡಬೇಕು.ರಾಜ್ಯದಲ್ಲಿಯೇ ಬೆಂಗಳೂರಿನ ಮತದಾನದ ಪ್ರಮಾಣ ಕಡಿಮೆ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವೆಂಕಟೇಶ್ ಮಾತನಾಡಿ, ನಾಗರಿಕರು ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ಮರೆಯಬಾರದು. ಚುನಾವಣೆ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬ ಮತದಾರರೂ ಇದನ್ನು ಅರಿತು ತಪ್ಪದೆ ಮತ ಚಲಾಯಿಸಬೇಕೆಂದು ಕರೆ ನೀಡಿದರು.

ಗಮನ ಸೆಳೆದ ಕಾರ್ಟೂನ್: ಮತದಾನದ ಜಾಗೃತಿ ಬಗ್ಗೆ ಕಲಾವಿದರೊಬ್ಬರು ರಚಿಸಿದ ಕಾರ್ಟೂನ್ ನೋಡುಗರ ಗಮನ ಸೆಳೆಯಿತು. ವೋಟ್ ಮಾಡಿ ಬಾ-ಹೋಗು ಎಂಬ ಯಮ ಹೇಳುವ ಸಂದೇಶವುಳ್ಳ ಈ ಕಾರ್ಟೂನ್ ಹೆಚ್ಚು ಗಮನ ಸೆಳೆಯಿತು.

ವ್ಯಂಗ್ಯಚಿತ್ರಕಾರರು ಹಾಗೂ ಕಲಾವಿದರು ಮತದಾನದ ಜಾಗೃತಿ ಮೂಡಿಸುವ ಕುರಿತು ರಚಿಸಿರುವ ಚಿತ್ರಗಳನ್ನು ಏ.2ರ ವರೆಗೂ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ವೀಕ್ಷಿಸಬಹುದಾಗಿದೆ.

ಈ ಸಂದರ್ಭದಲ್ಲಿ ಡೊಳ್ಳು ಕುಣಿತದ ಮೂಲಕ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಯಿತು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್.ಎಸ್.ನಕುಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಬೃಂಗೇಶ್, ಉಪ ನಿರ್ದೇಶಕ ಡಿ.ಪಿ.ಮುರಳೀಧರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ