ಐಟಿ ದಾಳಿ ಹಿಂದೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೈವಾಡ: ಸಿ.ಎಸ್ ಪುಟ್ಟರಾಜು

ಮಂಡ್ಯ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ಏಕಾಏಕಿ ದಾಳಿ ಹಿಂದೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೈವಾಡವಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು ಅವರು ಆರೋಪಿಸಿದ್ದಾರೆ.

ಸುದ್ದುಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರ ದೂರಿನ ಅನ್ವಯ ನನ್ನ ಮನೆ ಮೇಲೆ ದಾಳಿ ನಡೆದಿದೆ. ಯಾವುದೇ ದಾಳಿಗೂ ನಾನು ಹೆದರುವುದಿಲ್ಲ. ನನ್ನನ್ನು ಹೆದರಿಸುವ ಯತ್ನ ನಡೆಸಿದರೆ, ನಾನು ಬಗ್ಗೋದಿಲ್ಲ ಎಂದು ತಿಳಿಸಿದ್ದಾರೆ.

ಐಟಿ ಅಧಿಕಾರಿಗಳ ದಾಳಿಯ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರವಿದೆ. ಇದರ ಹಿಂದೆ ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ ಎಂದು ಪರೋಕ್ಷವಾಗಿ ಸುಮಲತಾ ವಿರುದ್ಧ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನನಗೆ 10 ರೂ. ಬಂದರೂ ಅದಕ್ಕೂ ಲೆಕ್ಕ ಇದೆ. 1985 ರಿಂದಲೂ ನಾವು ಈ ವಿಚಾರದಲ್ಲಿ ಪಕ್ಕಾ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಜೆಡಿಎಸ್ ನಾಯಕರು, ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಯಲಿದೆ ಎನ್ನುವ ಮಾಹಿತಿ ಇತ್ತು. ಆದರೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನ ಮನೆ ಮೇಲೆ ದಾಳಿ ನಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದರು.

ಚುನಾವಣೆ ಸಮಯದಲ್ಲಿ ದಾಳಿ ನಡೆಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಬೇಕು. ಈ ದಾಳಿಯಿಂದ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬಂದಿದೆ. ಇಂದಿನಿಂದ ಚುನಾವಣಾ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹೇಳಿದ್ದಾರೆ.

C.S Puttaraju,IT Raide,reaction

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ