58 ಮಂದಿ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಮಾ.26-ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಾಗಿ ದ್ವಿಚಕ್ರ ವಾಹನ ಕಳವು ಪ್ರಕರಣ ವರದಿಯಾಗುತ್ತಿತ್ತು. ಇವುಗಳನ್ನು ತಡೆಗಟ್ಟಲು ಹಾಗೂ ಪತ್ತೆಮಾಡಲು ನಗರ ಪೊಲೀಸ್ ಆಯುಕ್ತರು ಮತ್ತು ಅಪರ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಶೇಷ ಕಾರ್ಯಾಚರಣೆ ನಡೆಸಿರುವ ಚಿಕ್ಕಪೇಟೆ ಉಪವಿಭಾಗ, ಕೆಂಗೇರಿ ಗೇಟ್ ಉಪವಿಭಾಗ, ವಿಜಯನಗರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ ಆಯಾ ಠಾಣೆಗಳ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಪ್ರವೃತ್ತರಾಗಿ ಒಟ್ಟು 58 ಮಂದಿಯನ್ನು ಬಂಧಿಸಿ 93 ಲಕ್ಷ ಬೆಲೆಬಾಳುವ ವಿವಿಧ ಬಗೆಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಶಪಡಿಸಿಕೊಂಡಿರುವ ಒಟ್ಟು 274 ದ್ವಿಚಕ್ರ ವಾಹನಗಳ ಪೈಕಿ 112 ವಾಹನಗಳು ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ್ದವಾಗಿದ್ದು, 76 ವಾಹನಗಳು ಬೇರೆ ವಿಭಾಗದ ಠಾಣೆಗೆ ಸಂಬಂಧಿಸಿದ್ದವಾಗಿರುತ್ತವೆ. ಉಳಿದ 88 ಬೈಕ್‍ಗಳ ವಾರಸುದಾರರು ಪತ್ತೆಯಾಗಿರುವುದಿಲ್ಲ.

ಮಾಗಡಿ ರಸ್ತೆ ಪೊಲೀಸರು ಪ್ರಮುಖ ಆರೋಪಿಗಳಾದ ದಿನೇಶ, ಮಹೇಶ, ಪ್ರವೀಣ್, ಫೈಜ್ ಶರೀಫ್ ಎಂಬುವವರನ್ನು ಬಂಧಿಸಿ ಇವರ ಮಾಹಿತಿ ಮೇರೆಗೆ 55 ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.

ಬ್ಯಾಟರಾಯನಪುರ ಪೊಲೀಸರು ಆರೋಪಿ ಅಪ್ಪಾಜಿ ಎಂಬಾತನನ್ನು ಬಂಧಿಸಿ 14 ದ್ವಿಚಕ್ರ ವಾಹನ ವಶಪಡಿಸಿಕೊಂಡರೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪುನೀತ್‍ಕುಮಾರ್, ಪ್ರಮೋದ್, ತ್ರಿವೇಣಿಕುಮಾರ್, ಪುರುಷೋತ್ತಮ್, ರಮೇಶ್ ಎಂಬ ಆರೋಪಿಗಳನ್ನು ಬಂಧಿಸಿ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಪಿ ಅಗ್ರಹಾರ ಠಾಣೆ ಪೊಲೀಸರು ಮುಬಾರಕ್‍ಪಾಷ ಮತ್ತು ಯೋಗರಾಜ್ ಎಂಬ ಆರೋಪಿಗಳನ್ನು ಬಂಧಿಸಿ 28 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ