ಕೊಪ್ಪಳದಿಂದ ಶಾಸಕ ಶ್ರೀರಾಮುಲು ನಿಲ್ಲಿಸಲು ಹೈಕಮಾಂಡ್ ಚಿಂತನೆ

ಕೊಪ್ಪಳ,ಮಾ.26- ಬಾಕಿ ಉಳಿದಿರುವ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.

ಹಾಲಿ ಸಂಸದ ಕರಡಿ ಸಂಗಣ್ಣ ಅವರು ಈ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ಹರಸಾಹಸ ಮಾಡುತ್ತಿದ್ದು, ಟಿಕೆಟ್‍ಗಾಗಿ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ.

ನಾಮಪತ್ರ ಸಲ್ಲಿಸಲು ಏ.4 ಕಡೆಯ ದಿನವಾಗಿದ್ದು, ಎಲ್ಲಾ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಬಿಜೆಪಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಪ್ರಚಾರದ ಭರಾಟೆಯಲ್ಲಿದ್ದಾರೆ.ಪಕ್ಷದ ಅಧಿಕೃತ ಅಭ್ಯರ್ಥಿಗಳೆಲ್ಲರೂ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.ಕೊಪ್ಪಳ ಕ್ಷೇತ್ರಕ್ಕೆ ಟಿಕೆಟ್‍ಗಾಗಿ ಪೈಪೋಟಿ ನಡೆಯುತ್ತಿದೆ.

ಒಂದು ಮೂಲದ ಪ್ರಕಾರ ಈ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.ಮೋದಿ ಪ್ರಧಾನಿಯಾಗುವುದಕ್ಕೂ ಮುನ್ನ ಕ್ಷೇತ್ರದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಹಾಗಾಗಿ ಈ ಕ್ಷೇತ್ರದ ಮೇಲೆ ಒಲವು ವ್ಯಕ್ತಪಡಿಸಿದ್ದು ಇಲ್ಲಿ ಸ್ಪರ್ಧಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ರಾಜ್ಯ ಬಿಜೆಪಿ ಮುಖಂಡರು ಮೋದಿ ಸ್ಪರ್ಧಿಸುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಮೋದಿಯವರು ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಲಾಗಿದೆ.ಈಗ ಕೊಪ್ಪಳ ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ನಿನ್ನೆ ರಾಜ್ಯ ಬಿಜೆಪಿ ಮುಖಂಡರು ಶ್ರೀರಾಮುಲು ಜೊತೆ ಚರ್ಚೆ ನಡೆಸಿದರು.ಆದರೆ ಶ್ರೀರಾಮುಲು ಇದಕ್ಕೆ ಸುತಾರಾಂ ಒಪ್ಪಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸುವುದು; ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸುವುದರಿಂದ ಜನರಲ್ಲಿ ತಪ್ಪು ಭಾವನೆ ಬರುತ್ತದೆ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅಲ್ಲದೇ ಶ್ರೀರಾಮುಲು ಕೊಪ್ಪಳದಲ್ಲಿ ಸ್ಪರ್ಧಿಸಿದರೆ ಈ ಭಾಗದ ಐದು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿದೆ.ಆದರೆ ಶ್ರೀರಾಮುಲು ಇದಕ್ಕೆ ಒಪ್ಪಿದಂತೆ ಕಂಡುಬರುತ್ತಿಲ್ಲ.

ಒಂದೇ ಕಲ್ಲಿಗೆ ಮೂರು ನಾಲ್ಕು ಕೊಪ್ಪಳ ಬಿಜೆಪಿ ಲೋಕಸಭಾ ಟಿಕೆಟ್ ಆಕಾಂಕ್ಷಿಗಳನ್ನು ಒಡೆಯಲು ಬಿಜೆಪಿ ರೂಪಿಸಿರುವ ತಂತ್ರ ಫಲಿಸುತ್ತಾ..? ಜಿದ್ದಾಜಿದ್ದಿಗೆ ಬಿದ್ದು ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ನಿಂತು ಸೋತು, ಮೊಳಕಾಲ್ಮೂರಿನಲ್ಲಿ ಗೆದ್ದು ಶಾಸಕರಾಗಿರುವ ಬಿ ಶ್ರೀರಾಮುಲು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ..? ಹೈಕಮಾಂಡ್ ಸೂಚನೆಗೆ ಒಪ್ಪಿ, ಕಣಕ್ಕೆ ಇಳಿಯುತ್ತಾರಾ? ಅಥವಾ ಕೊನೆ ಕ್ಷಣದಲ್ಲಿ ಮೋದಿಯವರೇ ಇಲ್ಲಿಂದ ಸ್ಪರ್ಧಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ