ಇಂದು ನಾಮಪತ್ರ ಸಲ್ಲಿಸಿದ ಘಟಾನುಘಟಿ ರಾಜಕಾರಣಿಗಳು

ಬೆಂಗಳೂರು, ಮಾ.25-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್‍ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ಲೋಕಸಭೆ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದರು.

ದೇವೇಗೌಡರು, ಸದಾನಂದಗೌಡರು ಸೇರಿದಂತೆ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ತಮ್ಮ ಇಷ್ಟ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಕೆಲವು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಗಳು ಹಾಗೂ ಆಯಾ ಪಕ್ಷದ ನಾಯಕರು ಬಹಿರಂಗ ಸಭೆಗಳನ್ನು ನಡೆಸಿ ಮತಯಾಚನೆ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರು, ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ಸಂಜಯ್‍ನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‍ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಅನಿತಾಕುಮಾರಸ್ವಾಮಿ ಸೇರಿದಂತೆ ಸಚಿವರು, ಮುಖಂಡರೊಂದಿಗೆ ತೆರಳಿ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂಡ್ಯ ನಗರದಲ್ಲಿ ರೋಡ್‍ಶೋ ನಡೆಸಲಾಯಿತು.

ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಚ್.ವಿಜಯ್‍ಶಂಕರ್ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಕುಟುಂಬದ ಸದಸ್ಯರೊಂದಿಗೆ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ನಗರದಲ್ಲಿ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ವೀರಪ್ಪ ಮೊಯ್ಲಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ನಂದಿ ಬೆಟ್ಟದ ಗೋಗನಂದೀಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಚಿಕ್ಕಬಳ್ಳಾಪುರ ನಗರದಲ್ಲಿ ರೋಡ್‍ಶೋ ನಡೆಸಿ ಬಳಿಕ ಅಣಕೂರಿನಲ್ಲಿ ಬಹಿರಂಗ ಸಭೆಯನ್ನು ನಡೆಸಿದರು.

ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದೇ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿ ವರಲಕ್ಷ್ಮಿ, ಬಿಎಸ್‍ಪಿ ಅಭ್ಯರ್ಥಿಯಾಗಿ ಸಿ.ಎಸ್.ದ್ವಾರಕನಾಥ್ ಅವರು ಕೂಡ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಗಳಾದ ಮಾಜಿ ಸಚಿವ ಎ.ಮಂಜು ಹಾಸನ ಲೋಕಸಭಾ ಕ್ಷೇತ್ರದಲ್ಲಿ, ಸಂಸದ ನಳೀನ್‍ಕುಮಾರ್ ಕಟೀಲ್ ದಕ್ಷಿಣ ಕನ್ನಡ, ಮಾಜಿ ಸಚಿವ ಎ.ನಾರಾಯಣಸ್ವಾಮಿ-ಚಿತ್ರದುರ್ಗ, ಸಂಸದ ಪ್ರತಾಪ್‍ಸಿಂಹ-ಮೈಸೂರು- ಕೊಡಗು, ಎಸ್.ಮುನಿಸ್ವಾಮಿ-ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಾಮಪತ್ರ ಸಲ್ಲಿಸಿದರು.

ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮಿಥುನ್‍ರೈ-ದಕ್ಷಿಣಕನ್ನಡ, ಸಂಸದ ಬಿ.ಎನ್.ಚಂದ್ರಪ್ಪ-ಚಿತ್ರದುರ್ಗ, ಸಂಸದ ಆರ್.ಧ್ರುವನಾರಾಯಣ- ಚಾಮರಾಜನಗರ, ವಿಧಾನಪರಿಷತ್‍ಸದಸ್ಯ ರಿಜ್ವಾನ್ ಅರ್ಷದ್-ಬೆಂಗಳೂರು ಕೇಂದ್ರ, ಸಂಸದ ಕೆ.ಎಚ್.ಮುನಿಯಪ್ಪ -ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಬಹುತೇಕ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ರ್ಯಾಲಿ, ರೋಡ್‍ಶೋ, ಬಹಿರಂಗ ಸಮಾವೇಶಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳಂತೆಯೇ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ವಿವಿಧ ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಕೆ ಭರಾಟೆ ಇಂದು ಜೋರಾಗಿತ್ತು.

ಲೋಕ ಸಮರಕ್ಕೆ ನಾಮಪತ್ರ ಸಲ್ಲಿಸಿದ ದಿಗ್ಗಜರು

ಬಿಜೆಪಿ
1 ಡಿ.ವಿ.ಸದಾನಂದ ಗೌಡ- ಬೆಂಗಳೂರು ಉತ್ತರ
2 ಪ್ರತಾಪ್ ಸಿಂಹ- ಮೈಸೂರು
3 ಎ.ಮಂಜು- ಹಾಸನ
4 ನಳಿನಕುಮಾರ್ ಕಟೀಲ್- ದಕ್ಷಿಣಕನ್ನಡ
5 ಬಚ್ಚೇಗೌಡ- ಚಿಕ್ಕಬಳ್ಳಾಪುರ
6 ಎಸ್.ಮುನಿಸ್ವಾಮಿ- ಕೋಲಾರ
7 ಎ.ನಾರಾಯಣಸ್ವಾಮಿ-ಚಿತ್ರದುರ್ಗ

ಜೆಡಿಎಸ್
1 ಎಚ್.ಡಿ.ದೇವೇಗೌಡ- ತುಮಕೂರು
2 ನಿಖಿಲ್ ಕುಮಾರಸ್ವಾಮಿ- ಮಂಡ್ಯ

ಕಾಂಗ್ರೆಸ್
1 ವೀರಪ್ಪ ಮೊಯ್ಲಿ- ಚಿಕ್ಕಬಳ್ಳಾಪುರ
2 ರಿಜ್ವಾನ್ ಅರ್ಷದ್-ಬೆಂಗಳೂರು ಕೇಂದ್ರ
3 ಸಿ.ಎಚ್.ವಿಜಯಶಂಕರ್- ಮೈಸೂರು
4 ಆರ್. ಧ್ರುವನಾರಾಯಣ- ಚಾಮರಾಜನಗರ
5 ಕೆ.ಎಚ್.ಮುನಿಯಪ್ಪ- ಕೋಲಾರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ