ಸರ್ಕಾರಿ ಗೌರವಗಳೊಂದಿಗೆ ನೆರವೇರಲಿರುವ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ

ಕುಂದಗೋಳ,ಮಾ.23-ತೀವ್ರ ಹೃದಯಾಘಾತದಿಂದ ನಿನ್ನೆ ಹಠಾತ್ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮ ಎರೆಗುಪ್ಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಹಾಲುಮತ ಸಂಪ್ರದಾಯದಂತೆ ನೆರವೇರಲಿದೆ.

ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪಟ್ಟಣದ ಶಿವಾನಂದಮಠದಲ್ಲಿ ಸಚಿವ ಸಿ.ಎಸ್. ಶಿವಳ್ಳಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಅವರ ಬಂಧುಗಳು, ಅಭಿಮಾನಿಗಳು, ಸಾರ್ವಜನಿಕರು ಸಾಲಾಗಿ ನಿಂತು ಶಿವಳ್ಳಿಯವರ ಅಂತಿಮ ದರ್ಶನ ಪಡೆದರು.
ಶಿವಾನಂದಮಠದ ಬಸವರಾಜ ಸ್ವಾಮೀಜಿ, ಕಲ್ಯಾಣಪುರದ ಬಸವಣ್ಣಜ್ಜನವರು ಮತ್ತು ಹನಮನಹಳ್ಳಿ ಶಿವಬಸವ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಅಂತಿಮ ನಮನ ಸಲ್ಲಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಎನ್.ಎಚ್. ಕೋನರಡ್ಡಿ, ಶಾಸಕ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಸದಸ್ಯ ಉಮೇಶ ಹೆಬಸೂರು, ಶಾಂತವ್ವ ಗುಜ್ಜಳ, ನಾಗರಾಜ ಛಬ್ವಿ, ಗಂಗಾಧರ ಕುನ್ನೂರ, ಬಾಬಣ್ಣಾ ಧಾರವಾಡಶೆಟ್ಟರ, ಅಂದಾನೆಪ್ಪ ಉಪ್ಪಿನ, ಶಿವಾನಂದ ಬೆಂತೂರ, ಹರೀಶ್ ಲಕ್ಷ್ಮೇಶ್ವರ, ದಯಾನಂದ ಕುಂದೂರು, ಅಪ್ಪಣ್ಣ ಹಿರೇಗೌಡ್ರ, ಸುರೇಶ ಗಂಗಾಯಿ ಮತ್ತು ಪಟ್ಟಣ ಪಂಚಾಯ್ತಿ ಸರ್ವ ಸದಸ್ಯರು ಮತ್ತಿತರರು ಕೂಡಾ ಅಂತಿಮ ನಮನ ಸಲ್ಲಿಸಿದರು.

ಶಿವಾನಂದ ಮಠದಿಂದ ಅವರ ಸ್ವಗ್ರಾಮಕ್ಕೆ ಪ್ರಾರ್ಥೀವ ಶರೀರದ ಅಂತಿಮಯಾತ್ರೆ ನಡೆಸಲಾಗಿದ್ದು, ಮಾರ್ಗದುದ್ದಕ್ಕು ರಸ್ತೆಯ ಅಕ್ಕಪಕ್ಕಗಳಲ್ಲಿ ನಿಂತ ಜನ ತಮ್ಮ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು.

ಶಿವಳ್ಳಿಯವರ ಹುಟ್ಟೂರು ಎರೆಗುಪ್ಪಿಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಅವರ ನಿವಾಸದ ಎದುರು ಪಾರ್ಥೀವ ಶರೀರ ಕಂಡ ಗ್ರಾಮಸ್ಥರು, ಸಂಬಂಧಿಕರು ಬಿಕ್ಕಿ ಬಿಕ್ಕಿ ಅತ್ತರು.

ಶಿವಳ್ಳಿಯವರ ಅಂತ್ಯಕ್ರಿಯೆಯನ್ನು ಅವರ ಜಮೀನಿನಲ್ಲಿ ಅಂದರೆ ಅವರ ತಂದೆ, ತಾಯಿ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ