ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದರೆ ಕರ್ನಾಟಕದಲ್ಲಿ ಹೊಸ ದಾಖಲೆ

ಬೆಂಗಳೂರು,ಮಾ.22- ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಚಿತ್ರನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಗೆದ್ದರೆ ಕರ್ನಾಟಕದ ಮಟ್ಟಿಗೆ ಹೊಸದೊಂದು ದಾಖಲೆಯೇ ಸೃಷ್ಟಿಯಾಗಲಿದೆ.

ಏಕೆಂದರೆ ಕಳೆದ ಐದು ದಶಕಗಳಿಂದೀಚೆಗೆ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದು ಬೀಗಿರುವ ನಿದರ್ಶನವಿಲ್ಲ. ಈಗ ಮಂಡ್ಯದಿಂದ ಸ್ಪರ್ಧಿಸಿರುವ ಸುಮಲತಾ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಬಹುಭಾಷಾ ನಟ ಪ್ರಕಾಶ್ ರೈ ವಿಜೇತರಾದರೆ ಇತಿಹಾಸ ನಿರ್ಮಾಣವಾಗಲಿದೆ.

ಈ ಹಿಂದೆ 1957ರಲ್ಲಿ ಅಂದಿನ ಮೈಸೂರು-ಕರ್ನಾಟಕ ಇದ್ದ ವೇಳೆ ವಿಜಾಪುರ ಉತ್ತರ ಲೋಕಸಭಾ ಕ್ಷೇತ್ರದಿಂದ ಸುಗಂಧಿ ಮುರಿಗಪ್ಪ ಸಿದ್ದಪ್ಪ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರೆದರು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಜಿ.ವಾಮನ್ ಕಣಕ್ಕಿಳಿದಿದ್ದರು.

ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನಸೆಳೆದಿತ್ತು. ಒಟ್ಟು 3,53,151 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಗಂಧಿ ಮುರಿಯಪ್ಪ ಸಿದ್ದಪ್ಪ 88,209 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ವಾಮನ್ 77,223ಮತಗಳನ್ನು ಪಡೆದಿದ್ದರು.

ಅಂತಿಮವಾಗಿ ಪಕ್ಷೇತರ ಅಭ್ಯರ್ಥಿ 10936 ಮತಗಳಿಂದ ಗೆಲುವಿನ ನಗೆ ಬೀರಿದ್ದರು.

ಇದಾದ ನಂತರ ಮೈಸೂರು ಕರ್ನಾಟಕ ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ ನಂತರ 1967ರಲ್ಲಿ ಕೆನರಾ ಕ್ಷೇತ್ರ (ಈಗಿನ ಉತ್ತರ ಕನ್ನಡ)ದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದು ದಾಖಲೆ ನಿರ್ಮಿಸಿದ್ದರು.

ಅಂದು ಪಕ್ಷೇತರ ಅಭ್ಯರ್ಥಿಯಾಗಿ ಡಿ.ಡಿ.ದತ್ತಾತ್ರೇಯ ಸ್ಫರ್ಧಿಸಿದ್ದರೆ ಈ ಹಿಂದೆ ಬಿಜಾಪುರ ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಜಿ.ವಾಮನ್ ಇದೇ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದರು.

ಒಟ್ಟು 3,09,326 ಮತಗಳ ಪೈಕಿ ಡಿ.ಡಿ.ದತ್ತಾತ್ರೇಯ 1,43,297 ಮತಗಳನ್ನು ಪಡೆದರೆ ವಾಮನ್ 1,15,490 ಮತಗಳನ್ನಷ್ಟೆ ಪಡೆಯಲು ಶಕ್ತರಾದರು.ಫಲಿತಾಂಶದಲ್ಲಿ ದತ್ತಾತ್ರೇಯ 27,297 ಮತಗಳ ಅಂತರದಿಂದ ಗೆದಿದ್ದರು.

ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಅಷ್ಟೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ನಡೆಸಿ ಮತದಾರರನ್ನು ಓಲೈಕೆ ಮಾಡುವುದು ಅಷ್ಟು ಸರಳವಲ್ಲ.

ಆದರೆ ಮಂಡ್ಯದಿಂದ ಸ್ಪರ್ಧಿಸಿರುವ ಸುಮಲತಾ ವಿಷಯದಲ್ಲಿ ಇದನ್ನು ಹೇಳಲು ಸಾಧ್ಯವಿಲ್ಲ. ಒಂದು ಕಡೆ ಪತಿ ಅಂಬರೀಶ್ ಸಾವಿನ ಅನುಕಂಪ, ಸ್ಥಳೀಯ ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ, ಅಂಬರೀಶ್ ಅಭಿಮಾನಿಗಳು, ಸುಮಲತಾ ಅವರ ಭಾವನಾತ್ಮಕ ಭಾಷಣ, ಚಿತ್ರರಂಗದ ಬೆಂಬಲ ಕೈ ಹಿಡಿದರೆ ಫಲಿತಾಂಶ ಏನೂ ಬೇಕಾದರೂ ಆಗಬಹುದು.

ನಾಮಪತ್ರ ಸಲ್ಲಿಸುವ ವೇಳೆ ಸುಮಲತಾ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಈಗಿನ ಲೆಕ್ಕಾಚಾರದಲ್ಲಿ ಮಂಡ್ಯ ಫಲಿತಾಂಶ ಏನೂ ಬೇಕಾದರೂ ಆಗಬಹುದು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಜೆಡಿಎಸ್ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಅಪ್ಪನ ನಾಮಬಲ, ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಪಕ್ಷದ ಸಂಘಟನೆ, ಎಂಟು ಶಾಸಕರು, ಮೂವರು ಸಚಿವರು, ಗ್ರಾಮಪಂಚಾಯ್ತಿಯಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳು ಅವರ ತೆಕ್ಕೆಯಲ್ಲಿವೆ.

ಮತದಾರ ಸುಮಲತಾ ಸ್ಪರ್ಧೆಯನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಇನ್ನು ಬೆಂಗಳೂರು ಸೆಂಟ್ರಲ್‍ನಿಂದ ಕಣಕ್ಕಿಳಿದಿರುವ ಬಹುಭಾಷಾ ನಟ ಪ್ರಕಾಶ್ ರೈ ತೆಗೆದುಕೊಳ್ಳುವ ಮತಗಳು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ