ಖೋಟಾನೋಟು ಚಲಾವಣೆ ಮಾಡುತ್ತಿದ್ದ ಮೂವರ ಬಂಧನ

ತುಮಕೂರು,ಮಾ.20-ನಗರದ ಬಸ್ ನಿಲ್ದಾಣದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಮೂವರು ಖತರ್ನಾಕ್ ವಂಚಕರನ್ನು ನಗರ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಡೂರಿನ ತಮ್ಮಣ್ಣ, ಗೌರಿಬಿದನೂರಿನ ಅಪ್ರೊ ಮತ್ತು ಹುಲಿಕುಂಟೆಯ ಮಾರುತಿ ಬಂಧಿತ ಆರೋಪಿಗಳಾಗಿದ್ದು, ಖೋಟಾನೋಟಿನ ರೂವಾರಿ ಕೋಲ್ಕತ್ತಾ ಮೂಲದ ವ್ಯಕ್ತಿಗಾಗಿ ಶೋಧ ಮುಂದುವರೆದಿದೆ.

ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಖೋಟಾನೋಟು ಚಲಾವಣೆ ಮಾಡಲು ಮೂವರು ವ್ಯಕ್ತಿಗಳು ಬಂದಿದ್ದಾರೆ ಎಂಬ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಅವರಿಗೆ ಬಂದಿದ್ದು ತಕ್ಷಣ ನಗರ ಠಾಣೆ ಇನ್‍ಸ್ಪೆಕ್ಟರ್ ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಚಂದ್ರಶೇಖರ್ ಅವರು ಸಿಬ್ಬಂದಿಗಳೊಂದಿಗೆ ಮಫ್ತಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಹೊಂಚು ಹಾಕಿ ಈ ಮೂವರು ಖೋಟಾನೋಟು ಚಲಾವಣೆ ಮಾಡುತ್ತಿದ್ದಾಗ ಮಾಲು ಸಮೇತ ಸೆರೆ ಹಿಡಿದಿದ್ದಾರೆ.

ಆರೋಪಿಗಳಿಂದ 1.25 ಲಕ್ಷ ರೂ.ಖೋಟಾನೋಟಿನ ಜೊತೆಗೆ 15 ಸಾವಿರ ಹಣ ಹಾಗೂ ಬೈಕ್‍ನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಗೆ ಸೆರೆ ಸಿಕ್ಕ ಮೂವರು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಿದಾಗ, ಈ ಗ್ಯಾಂಗ್‍ನಲ್ಲಿ ಮಹಿಳೆಯರು ಇದ್ದಾರೆ ಎಂಬುದು ತಿಳಿದುಬಂದಿದೆ.

ಖೋಟಾನೋಟು ಚಲಾವಣೆ ಸಂಬಂಧ ಮಹಿಳೆಯೊಬ್ಬರ ಮೇಲೆ ಈಗಾಗಲೇ ಕೊರಟಗೆರೆ ಹಾಗೂ ದಾಬಸ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಕೋಲ್ಕತ್ತಾ ಮೂಲದ ಪ್ರಮುಖ ರೂವಾರಿ ಎಂದು ಹೇಳಲಾಗುತ್ತಿದ್ದು, ತನಿಖೆ ನಡೆಸುತ್ತಿರುವ ತಂಡ ಆರೋಪಿಗಳಾದ ತಮ್ಮಣ್ಣ ಮತ್ತು ಮಾರುತಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಕೋಲ್ಕತ್ತಾ ಮೂಲದ ವ್ಯಕ್ತಿ ಬಗ್ಗೆ ವಿಚಾರಿಸಿದಾಗ ಆತ ದೂರವಾಣಿಯಲ್ಲಿ ಮಾತ್ರ ಮಾತನಾಡುತ್ತಾನೆ ಎಂದು ಹೇಳಿದ್ದಾರೆ.

ಕೋಲ್ಕತ್ತಾ ಮೂಲದ ವ್ಯಕ್ತಿಗೆ ದೂರವಾಣಿ ಕರೆ ಮಾಡುವಂತೆ ಆರೋಪಿ ತಮ್ಮಣ್ಣನಿಗೆ ಪೊಲೀಸರು ಸೂಚಿಸಿದ್ದಾರೆ.ಅದರಂತೆ ದೂರವಾಣಿ ಕರೆ ಮಾಡಿ ನಮಗೆ ಇನ್ನು ಹೆಚ್ಚು ಖೋಟಾನೋಟು ಬೇಕಾಗಿದೆ. ಕಳುಹಿಸಿಕೊಡಿ. ಈಗ ಕಳುಹಿಸಿರುವ ಮಾಲು ಚಲಾವಣೆಯಾಗಿ ಅಸಲಿ ನೋಟನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದಾಗ ತಕ್ಷಣ ಪ್ರತಿಕ್ರಿಯಿಸಿದ ಆತ ನನ್ನ ಬ್ಯಾಂಕ್‍ನ ಅಕೌಂಟ್‍ಗೆ ಅಸಲಿ ಹಣವನ್ನು ಹಾಕಿ ದೂರವಾಣಿಯಲ್ಲಿ ಹೆಚ್ಚು ಮಾತನಾಡುವುದು ಬೇಡ ಎಂದು ಆನಂತರ ಮಾತನಾಡುತ್ತೇನೆ ಹೇಳಿ ಸಂಪರ್ಕ ಕಡಿತಗೊಳಿಸಿ ಮೊಬೈಲ್‍ನ್ನು ಸ್ವಿಚ್‍ಆಫ್ ಮಾಡಿದ್ದಾನೆ.

ತುಮಕೂರು ಜಿಲ್ಲೆ ಸೇರಿದಂತೆ ಬೆಂಗಳೂರು ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು ಇನ್ನಿತರೆಡೆ ಆಪ್ತರ ಮೂಲಕ ಕೋಟಾನೋಟನ್ನು ಚಲಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಗರಠಾಣೆ ಇನ್‍ಸ್ಪೆಕ್ಟರ್ ಚಂದ್ರಶೇಖರ್ ಅವರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ, ಡಿವೈಎಸ್‍ಪಿ ತಿಪ್ಪೇಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ