ಇಂದಿನಿಂದ ಆರಂಭಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ಬೆಂಗಳೂರು, ಮಾ.19- ಲೋಕಸಭೆ ಚುನಾವಣೆಗೆ ಇಂದಿನಿಂದ ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, 26ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವಾಗ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಾಲ್ಕನೆ ಶನಿವಾರ ಹಾಗೂ ಭಾನುವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿರುವುದಿಲ್ಲ. ಉಳಿದ ದಿನದಂದು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 11 ರಿಂದ 3ಗಂಟೆವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಈ ವೇಳೆ ಚುನಾವಣಾಧಿಕಾರಿ ಬಳಿ ತೆರಳಿ ಐವರು ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ನಾಮಪತ್ರದ ಜತೆಗೆ ಅಫಿಡವಿಟ್ ಕಡ್ಡಾಯವಾಗಿರುತ್ತದೆ. ಕ್ರಿಮಿನಲ್ ಕೇಸ್ ಇರುವ ಅಭ್ಯರ್ಥಿಗಳು ಅಫಿಡವಿಟ್‍ನಲ್ಲಿ ಸಂಪೂರ್ಣ ದಾಖಲೆ ನಮೂದಿಸಬೇಕು.

ಕ್ರಿಮಿನಲ್ ಕೇಸ್ ಇದ್ದ ವ್ಯಕ್ತಿ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಮೂರು ಬಾರಿ ಜಾಹೀರಾತು ಪ್ರಕಟಿಸಬೇಕು.

ಅಭ್ಯರ್ಥಿಗಳು ಸಲ್ಲಿಸುವ ಭಾವಚಿತ್ರ ಮೂರು ತಿಂಗಳಿಗಿಂತ ಹಳೆಯದಾಗಿರಬಾರದು. ಅಫಿಡವಿಟ್‍ನಲ್ಲಿ ಯಾವುದೇ ಕಾಲಂಅನ್ನು ಖಾಲಿ ಬಿಡಬಾರದು. ಅಭ್ಯರ್ಥಿ ಪ್ರತ್ಯೇಕ ಬ್ಯಾಂಕ್ ಖಾತೆ ಆರಂಭಿಸಬೇಕು. ಅದರ ಮೂಲಕವೇ ವ್ಯವಹಾರ ನಡೆಸಬೇಕೆಂದು ತಿಳಿಸಿದರು.

ವಿಚಾರಣಾಧೀನ ಕೈದಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈಗಾಗಲೇ ಎರಡು ಸಾವಿರ ರೌಡಿಶೀಟರ್‍ಗಳ ಬಳಿ ಒಂದರಿಂದ 5 ಲಕ್ಷದವರೆಗೂ ಬಾಂಡ್ ಬರೆಸಿಕೊಳ್ಳಲಾಗಿದೆ ಎಂದರು.

ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರವಾರು ಎಸಿಪಿ ಹಂತದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದುವರೆಗೂ 7500 ಶಸ್ತ್ರಾಸ್ತ್ರಗಳನ್ನು ಠಾಣೆಗೆ ಹಸ್ತಾಂತರಿಸಲಾಗಿದೆ. ಈಗಾಗಲೇ ರೌಡಿ ಶೀಟರ್‍ಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ಗೂಂಡಾ ಕಾಯ್ದೆಯಡಿ ಒಬ್ಬನನ್ನು ಬಂಧಿಸಲಾಗಿದೆ. ಈಸ್ಟ್ ಡಿವಿಜನಲ್‍ನಲ್ಲೂ ಸಹ ಓರ್ವನನ್ನು ಬಂಧಿಸಲಾಗಿದೆ ಎಂದರು.

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬೊಬ್ಬರು ನೋಡೆಲ್ ಆಫೀಸರ್‍ಗಳನ್ನು ನೇಮಕ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ