ಯಾರಾಗಲಿದ್ದಾರೆ ಗೋವಾದ ನೂತನ ಸಿಎಂ…?

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ನಿಧನದ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಕಸರತ್ತು ನಡೆಸಿದ್ದು, ಒಂದೆಡೆ ಸುದಿನ್ ಧವಳೀಕರ್ ಹೆಸರು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಪ್ರಮೋದ್ ಸಾವಂತ್ ಮತ್ತು ವಿಶ್ವಜಿತ್ ರಾಣೆ ಅವರ ಹೆಸರು ಕೂಡ ಕೇಳಿಬಂದಿದೆ.

ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮನೋಹರ್ ಪರಿಕ್ಕರ್ ದೀರ್ಘಕಾಲದ ಅನಾರೋಗ್ಯದ ಬಳಿಕ ಪಣಜಿಯ ತಮ್ಮ ಖಾಸಗಿ ನಿವಾಸದಲ್ಲಿ ನಿನ್ನೆ ನಿಧನರಾದರು. ನೂತನ ನಾಯಕನ ಆಯ್ಕೆಗಾಗಿ ನಡೆದ ಬಿಜೆಪಿ ಶಾಸಕರು ಮತ್ತು ಮಿತ್ರಪಕ್ಷಗಳ ಸಭೆಯಲ್ಲಿ ಕೆಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ತಿಳಿಸಿದ್ದಾರೆ. ಆದರೆ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಒಮ್ಮತಕ್ಕೆ ಬರಲಾಗಿಲ್ಲ.

ತಡರಾತ್ರಿ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಲೋಬೋ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಶಾಸಕ ಸುದಿನ್ ಧವಳೀಕರ್ ಮುಖ್ಯಮಂತ್ರಿ ಹುದ್ದೆ ಬಯಸಿದ್ದು, ಸಭೆ ಅರ್ಧಕ್ಕೆ ಅಂತ್ಯಗೊಳ್ಳಲು ಕಾರಣವಾಯಿತು ಎಂದು ತಿಳಿಸಿದರು.

‘ಸುನಿಲ್ ಧವಳೀಕರ್‌ ಮುಖ್ಯಮಂತ್ರಿ ಹುದ್ದೆ ಬಯಸಿದ್ದಾರೆ. ಬಿಜೆಪಿಗೆ ಬೆಂಬಲಿಸುವ ಮೂಲಕ ಹಲವು ಬಾರಿ ತಾವು ತ್ಯಾಗ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಬಿಜೆಪಿ ಅವರ ಬೇಡಿಕೆಗೆ ಒಪ್ಪಿಲ್ಲ’ ಎಂದು ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಲೋಬೋ ತಿಳಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ಶಾಸಕರು ವಿಶ್ವಜಿತ್ ರಾಣೆ ಮತ್ತು ಪ್ರಮೋದ್ ಸಾವಂತ್‌ ಹೆಸರುಗಳನ್ನು ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ.

ಈ ನಡುವೆ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮುಖ್ಯಸ್ಥ ವಿಜಯ್ ಸರ್‌ದೇಸಾಯಿ ಪಕ್ಷದ ಶಾಸಕರಾದ ಜಯೇಶ್ ಸಲಗಾಂವ್ಕರ್ ಮತ್ತು ವಿನೋದ್ ಪಾಲೇಕರ್ ಹಾಗೂ ಪಕ್ಷೇತರ ಶಾಸಕರಾದ ರೋಹನ್ ಕೌಂಟೆ, ಗೋವಿಂದ್ ಗಾವಡೆ ಮತ್ತು ಪ್ರಸಾದ್ ಗಾಂವ್ಕರ್ ಕೂಡ ಭಾನುವಾರ ತಡರಾತ್ರಿ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು.

ನಿತಿನ್ ಗಡ್ಕರಿ ಅವರು ಒಬ್ಬೊಬ್ಬ ಶಾಸಕರ ಜತೆ ಪ್ರತ್ಯೇಕವಾಗಿ ಮಾತನಾಡಿದರು. ಅಂತಿಮ ತೀರ್ಮಾನವನ್ನು ನಿತಿನ್ ಗಡ್ಕರಿ ಅವರು ಪ್ರಕಟಿಸಲಿದ್ದು, ಶೀಘ್ರವೇ ನೂತನ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ ಎಂದು ಎಂಜಿಪಿ ಶಾಸಕ ಸುದಿನ್ ಧವಳೀಕರ್‌ ತಿಳಿಸಿದ್ದಾರೆ.

ಪರಿಕ್ಕರ್ ನಿಧನದ ಬಳಿಕ ಗೋವಾ ವಿಧಾನಸಭೆಯಲ್ಲಿ ಒಟ್ಟು ಸಂಖ್ಯಾಬಲ 36ಕ್ಕೆ ಇಳಿದಿದೆ. ಬಿಜೆಪಿ ಶಾಸಕ ಫ್ರಾನ್ಸಿಸ್‌ ಡಿಸೋಜಾ ಕಳೆದ ತಿಂಗಳು ನಿಧನರಾಗಿದ್ದರು. ಇಬ್ಬರು ಕಾಂಗ್ರೆಸ್ ಶಾಸಕರು ಕಳೆದ ವರ್ಷವೇ ಪಕ್ಷ ತೊರೆದಿದ್ದರು. ಸಧ್ಯ ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ- ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ.

Next Goa CM,BJP Meeting,goa assembly effective strength

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ