ಪರಿಕ್ಕರ್​ ಉತ್ತರಾಧಿಕಾರಿ ಆಯ್ಕೆಗೆ ರಾತ್ರಿಯಿಡಿ ಸಭೆ ನಡೆಸಿದ ನಿತಿನ್ ಗಡ್ಕರಿ; ಯಾರಾಗಲಿದ್ದಾರೆ ಗೋವಾ ಮುಂದಿನ ಸಿಎಂ?

ಪಣಜಿಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಭಾನುವಾರ ರಾತ್ರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಗೆ ಆಗಮಿಸಿ, ಮೈತ್ರಿ ಪಕ್ಷಗಳ ನಾಯಕರೊಂದಿಗೆ ರಾತ್ರಿಯಿಡಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುಂದಿನ ಉತ್ತರಾಧಿಕಾರಿ ಮತ್ತು ಅಧಿಕಾರ ಪಡೆಯಲು ಎರಡನೇ ಬಾರಿಗೆ ಕಾಂಗ್ರೆಸ್​ ನಡೆಸುತ್ತಿರುವ ಪ್ರಯತ್ನ ಕುರಿತಾಗಿ ಚರ್ಚೆ ನಡೆಸಿದ್ದಾರೆ.

2017ರಂದು ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಸರ್ಕಾರ ರಚನೆಗೆ ಬೇಕಾದ ಸ್ಪಷ್ಟ ಬಹುಮತ ಇರಲಿಲ್ಲ. ಇದೇ ವೇಳೆ ನಿತಿನ್​ ಗಡ್ಕರಿ ಇತರ ಪಕ್ಷಗಳನ್ನು ಒಟ್ಟುಗೂಡಿಸಿ, ಬಿಜೆಪಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾಗುವಂತೆ ನೋಡಿಕೊಂಡರು.

ಬಿಜೆಪಿ ಮನೋಹರ್​ ಪರಿಕ್ಕರ್​ ಮುಖ್ಯಮಂತ್ರಿಯಾದರು.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ನೆನ್ನೆ ರಾತ್ರಿ ವಿಧಿವಶರಾದರು. ಗೋವಾದಲ್ಲಿ ಬಿಜೆಪಿ ಮಹಾರಾಷ್ಟ್ರವಾದಿ ಗೋಮಾತಕ್​ (ಎಂಜಿಪಿ) ಮತ್ತು ಗೋವಾ ಫಾವರ್ಡ್​ ಪಾರ್ಟಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದೆ.

ಶಾಸಕ ಫ್ರಾನ್ಸಿಸ್​ ಡಿ’ಸೋಜಾ ನಿಧನದಿಂದಾಗಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಬಹುಮತದ ಕೊರತೆ ಭೀತಿ ಎದುರಾಗುವ ಸ್ಥಿತಿಗೆ ಬಂದು ನಿಂತಿತ್ತು. 40 ಸದಸ್ಯ ಬಲದ ಗೋವಾ ವಿಧಾನಸಭೆ ಫ್ರಾನ್ಸಿಸ್​ ನಿಧನ ಹಾಗೂ ಇಬ್ಬರ ಕಾಂಗ್ರೆಸ್​ ಶಾಸಕರ ರಾಜೀನಾಮೆಯಿಂದಾಗಿ 37 ಸ್ಥಾನಕ್ಕೆ ಕುಸಿದಿತ್ತು. ಕಾಂಗ್ರೆಸ್​ನಲ್ಲಿ 14 ಶಾಸಕರಿದ್ದರೆ ಬಿಜೆಪಿಯಲ್ಲಿ 13 ಶಾಸಕರು ಇದ್ದಾರೆ.

ಗೋವಾ ಬಿಜೆಪಿಯಲ್ಲಿ ಮನೋಹರ್​ ಪರಿಕ್ಕರ್ ಬಹುದೊಡ್ಡ ನಾಯಕ. ಪಕ್ಷದಲ್ಲಿ ಅವರು ಉನ್ನತ ಹುದ್ದೆ ಅಲಂಕರಿಸಿದ್ದವರು. ಮೈತ್ರಿ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುವ ಚಾಕಚಕ್ಯತೆ ಇದ್ದವರು. ಮುಖ್ಯಮಂತ್ರಿ ಆಗಿದ್ದಾಗಲೇ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕೇಂದ್ರಕ್ಕೆ ಹೋಗಿದ್ದರು. ಆನಂತರ ಮತ್ತೆ ಗೋವಾ ಸಿಎಂ ಆಗಿ ವಾಪಸ್ಸಾದರು. ಆದರೆ, ಕ್ಯಾನ್ಸರ್​ಗೆ ತುತ್ತಾದ ಪರಿಕ್ಕರ್ ಕಳೆದೊಂದು ವರ್ಷದಿಂದ ಆಸ್ಪತ್ರೆಯಲ್ಲಿಯೇ ಜೀವ ಸವೆಸುವಂತಾಯಿತು.

ಇದೀಗ ಅವರ ನಿಧನದಿಂದಾಗಿ ಗೋವಾದಲ್ಲಿ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿವೆ.

ರಾತ್ರಿ ಮೈತ್ರಿ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಎಂಜಿಪಿಯ ಸುದೀನ್​ ಧವಲಿಕರ್ ಅವರು ಬಿಜೆಪಿ ಶಾಸಕ ಹಾಗೂ ವಿಧಾನಸಭೆಯ ಉಪಸ್ಪೀಕರ್ ಮೈಕಲ್ ಲೋಬೊ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಾಯಿಸಿದರು. ಆದರೆ ಪರಿಕ್ಕರ್ ಉತ್ತರಾಧಿಕಾರಿ ಸ್ಥಾನಕ್ಕೆ ಮತ್ತೊಬ್ಬ ಬಿಜೆಪಿ ಶಾಸಕನನ್ನು ಆರಿಸಲು ಎಲ್ಲರೂ ತೀರ್ಮಾನಿಸಿದರು. ಅದರಂತೆ ಬಿಜೆಪಿ ಶಾಸಕರು ವಿಶ್ವಜಿತ್ ರಾನೆ ಮತ್ತು ಪ್ರಮೋದ್ ಸಾವಂತ್​ ಹೆಸರನ್ನು ಸೂಚಿಸಿದರು. ಅದರಂತೆ ಇವರಿಬ್ಬರಲ್ಲಿ ಯಾರಾದರು ಒಬ್ಬರು ಮುಂದಿನ ಗೋವಾ ಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ