ಡಿಕೆಶಿಗೆ ಇಡಿ ಸಮನ್ಸ್​; ಇಂದು ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಬೆಂಗಳೂರುಸಚಿವ ಡಿ.ಕೆ. ಶಿವಕುಮಾರ್​ಗೆ ಸಮನ್ಸ್​ ಜಾರಿಗೊಳಿಸಿದ್ದ ಜಾರಿ ನಿರ್ದೇಶನಲಾಯದ ಪ್ರಕರಣದ ವಿಚಾರಣೆ  ಇಂದು ಹೈಕೋರ್ಟ್​ನಲ್ಲಿ ನಡೆಯಲಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಒಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅದರ ಸಿದ್ಧತೆಯಲ್ಲಿರುವ ಸಚಿವ ಡಿಕೆಶಿಗೆ ಇಂದು ಮಹತ್ವದ ದಿನವಾಗಿದೆ. ಇಡಿ ಸಮನ್ಸ್​, ಮೂಲ ಪ್ರಕರಣ ರದ್ದು ಕೋರಿ ಡಿಕೆಶಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ರಿಟ್​ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. ಖುದ್ದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಜ.17ರಂದು ಸಮನ್ಸ್​ ಜಾರಿಗೊಳಿಸಿತ್ತು. ಫೆ. 8ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ನಲ್ಲಿ ಸೂಚಿಸಲಾಗಿತ್ತು.

ಆದರೆ, ಬಜೆಟ್ ಅಧಿವೇಶನ ನಡೆಯುತ್ತಿದ್ದ ಕಾರಣದಿಂದ ಸಚಿವ ಡಿಕೆಶಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದರು. ಡಿ.ಕೆ. ಶಿವಕುಮಾರ್​ ವಿರುದ್ಧ 276ಸಿ, ಐಟಿ ಕಾಯ್ದೆ 277, 120ಬಿ ಐಪಿಸಿ ಅಡಿಯಲ್ಲಿ ಐಟಿ ಪ್ರಕರಣ ದಾಖಲಿಸಿತ್ತು. ಸಮನ್ಸ್​ ರದ್ದುಗೊಳಿಸುವಂತೆ ಕೋರಿ ಡಿಕೆಶಿ ಜೊತೆಗೆ ಅವರ ಆಪ್ತರಾದ ಸುನಿಲ್ ಶರ್ಮ, ಸಚಿನ್​ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇಂದು ಡಿಕೆಶಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಸಾಧ್ಯತೆಯಿದೆ. ಹೀಗಾಗಿ, ಡಿಕೆಶಿ ಅರ್ಜಿಗಳ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.ಒಂದುವೇಳೆ ಜಾರಿ ನಿರ್ದೇಶನಾಲಯದ ಸಮನ್ಸ್​ ಅನ್ನು ಹೈಕೋರ್ಟ್​ ರದ್ದುಗೊಳಿಸಿ ಆದೇಶ ನೀಡಿದರೆ ಡಿಕೆ ಶಿವಕುಮಾರ್​ಗೆ ರಿಲ್ಯಾಕ್ಸ್​ ಸಿಗಲಿದೆ. ಸಮನ್ಸ್​ ರದ್ದಾಗದೇ ಹೋದರೆ ಡಿಕೆಶಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ. ಒಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಡಿಕೆಶಿ ಅವರನ್ನು ವಶಕ್ಕೆ ಪಡೆದರೆ ಅದು ಅವರ ರಾಜಕೀಯ ಜೀವನದ ಮೇಲೂ ಪರಿಣಾಮ ಬೀರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ