ರಾಜ್ಯ ಸರ್ಕಾರ ಕೇಂದ್ರಕ್ಕಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡುತ್ತಿದೆ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಮಾ.6-ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ಕಾರಣಕ್ಕಾಗಿ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಕೇಂದ್ರಕ್ಕಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕೃಷಿ ಪಂಡಿತ್ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ 45 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದೆ. ಹಾಲು ಉತ್ಪಾದಕರಿಗೆ ಎರಡೂವರೆ ಸಾವಿರ ಕೋಟಿ ಪ್ರೋತ್ಸಹ ಧನ ನೀಡುತ್ತಿದೆ. ಏಪ್ರಿಲ್‍ನಿಂದ ಹಾಲಿನ ಪ್ರೋತ್ಸಹ ಇನ್ನೊಂದು ಒಂದು ರೂ. ಹೆಚ್ಚಿಸಲಾಗಿದೆ. ಕೃಷಿ ಪಂಪ್‍ಸೆಟ್‍ಗೆ ಹನ್ನೊಂದೂವರೆ ಸಾವಿರ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ವಿದ್ಯುತ್ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ರಾಜ್ಯಸರ್ಕಾರ 14 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಪ್ರಕಟಿಸಿದೆ. ಅದರಲ್ಲಿ ರಾಜ್ಯದ ರೈತರಿಗೆ ಸಿಗುವುದು ಕೇವಲ 2.95 ಕೋಟಿ ರೂ. ಮಾತ್ರ. ಮೋದಿಯವರು 70 ವರ್ಷ ಆಗದೆ ಇರುವ ಅಭಿವೃದ್ಧಿಯನ್ನು 55 ತಿಂಗಳಲ್ಲೇ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಅದು ಯಾವ ಅಭಿವೃದ್ಧಿಯಾಗಿದೆಯೋ ಗೊತ್ತಿಲ್ಲ. ಆದರೆ ರಾಜ್ಯಸರ್ಕಾರ ರೈತರಿಗಾಗಿಯೇ ಇದೆ. ರೈತರ ಪರವಾಗಿದೆ. ನಮ್ಮನ್ನು ನಂಬಿ, ನಿಮಗೆ ನೋವು ಕೊಟ್ಟು ನಾವು ಆಡಳಿತ ಮಾಡುವುದಿಲ್ಲ. ನಿಮಗೆ ಯಾವುದೇ ಸಮಸ್ಯೆ ಬಂದರೂ ನಾವಿದ್ದೇವೆ ಎಂದು ಹೇಳಿದರು.

ರೈತರು ಹೆಣ್ಣು ಮಕ್ಕಳ ಒಡವೆಗಳನ್ನು ಗಿರವಿ ಇಟ್ಟು ಸಾಲ ಪಡೆಯುವ ಪರಿಸ್ಥಿತಿ ತಪ್ಪಿಸಲು ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ ಜಾರಿಗೆ ತರಲಾಗಿದೆ. ರೈತ ಹೆಣ್ಣು ಮಕ್ಕಳ ಒಡವೆಗಳಿಗೆ ಸರ್ಕಾರವೇ ಬಡ್ಡಿ ಪಾವತಿಸಿ ಒಡವೆ ಬಿಡಿಸಿಕೊಡಲಿದೆ. ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ನೇರವಾಗಿ ಮಾರುಕಟ್ಟೆ ಪ್ರವೇಶಿಸಿ ಬೆಂಬಲ ಬೆಲೆಯಡಿ ಬೆಳೆ ಖರೀದಿ ಮಾಡಲು 500 ಕೋಟಿ ರೂ. ಕಾಯ್ದಿರಿಸಲಾಗಿದೆ. ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಕೂಲಿ ಹಣ ಬಿಡುಗಡೆ ಮಾಡಿಲ್ಲ.

ರಾಜ್ಯ ಸರ್ಕಾರ ತನ್ನ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟು ಆ ಮೂಲಕ ಕೆಲಸ ಮಾಡಿದವರಿಗೆ ಕೂಲಿ ಕೊಡಿಸಲಾಗುತ್ತಿದೆ. ಸಿರಿಧಾನ್ಯಕ್ಕೆ ಹೆಚ್ಚಿನ ಪ್ರೋತ್ಸಹ ನೀಡಲಾಗುತ್ತಿದೆ. ರೇಷ್ಮೆ ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

ಹೆದರಿ ಓಡಿ ಬಂದೆ:
ಪ್ರಶಸ್ತಿ ಪುರಸ್ಕøತ 21 ಮಂದಿ ರೈತರು ಮುಖ್ಯಮಂತ್ರಿಗಳಿಲ್ಲದಿದ್ದರೆ ಪ್ರಶಸ್ತಿ ಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದರು. ಅದಕ್ಕಾಗಿ ನಾನು ಹೆದರಿ ಓಡಿ ಬಂದೆ. ಇಂದು ಹಲವಾರು ಸಭೆಗಳನ್ನು ನಡೆಸಬೇಕಿದೆ. ಸಭೆಯನ್ನು ಅರ್ಧಕ್ಕೇ ಬಿಟ್ಟು ಎದ್ದೆನೋ, ಬಿದ್ದೆನೋ ಎಂದು ಬಂದಿದ್ದೇನೆ. ಇಲ್ಲದಿದ್ದರೆ ಮಾಧ್ಯಮಗಳು ಕುಮಾರಸ್ವಾಮಿ ರೈತರಿಗೆ ಅವಮಾನ ಮಾಡಿದರು ಎಂದು ಪ್ರಚಾರ ಮಾಡುತ್ತಾರೆ. ನಾನು ಸದಾ ರೈತರ ಜೊತೆ ಇರುತ್ತೇನೆ. ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಇದ್ದರೆ ನಾನಿದ್ದಂತೆ. ನನ್ನ ಆಲೋಚನೆಗೆ ತಕ್ಕಂತೆ ವೇಗದಲ್ಲಿ ಅವರು ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ರೈತರ ವಿಷಯ ಬಂದಾಗ ಚೀಟಿಯಲ್ಲಿ ಬರೆದುಕೊಂಡು ಭಾಷಣ ಮಾಡುವುದಿಲ್ಲ. ಎಲ್ಲವನ್ನೂ ನನ್ನ ತಲೆಯಲ್ಲಿ ತುಂಬಿಕೊಂಡಿದ್ದೇನೆ. ನಾನು ಸದಾ ನಿಮ್ಮ ಜೊತೆಗಿದ್ದೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ