ಏರ್‍ಸ್ಟ್ರೈಕ್ ವಿಚಾರವನ್ನು ರಾಜಕೀಯವಾಗಿ ಯಾರು ಬಳಸಿಕೊಳ್ಳಬಾರದು-ಗೃಹ ಸಚಿವ ಎಂ.ಬಿ.ಪಾಟೀಲ್

ಹುಬ್ಬಳ್ಳಿ, ಮಾ.3- ಏರ್‍ಸ್ಟ್ರೈಕ್ ದಾಳಿ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ನಾವು ಕೇಳುವುದಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ವಿರುದ್ಧ ದೇಶದ ಯೋಧರು ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇದೊಂದು ಸೂಕ್ಷ್ಮ ವಿಚಾರ. ವಾಯುದಾಳಿ ನಂತರ ಸಹಜವಾಗಿ ವಿಡಿಯೋ ಬಿಡುಗಡೆ ಮಾಡುತ್ತಾರೆ. ಅದನ್ನು ಮಾಡಬೇಕೆಂದು ನಾವು ಒತ್ತಾಯಿಸುವುದಿಲ್ಲ. ತೊಂದರೆ ಇದ್ದರೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ರಾಘವೇಂದ್ರ ಹಿಟ್ನಾಳ್ ಸಾಕ್ಷಿ ಕೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವನ್ನು ರಾಜಕೀಯವಾಗಿ ಯಾರೂ ಬಳಸಿಕೊಳ್ಳಬಾರದು. ಚುನಾವಣೆಗಾಗಿ ಬಳಸಿಕೊಳ್ಳುವುದು ಸರಿಯಾದುದಲ್ಲ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇನೆಯ ಬಗ್ಗೆ ಏನು ಹೇಳಿದ್ದಾರೆಂಬುದು ನಮಗೆ ಗೊತ್ತಿದೆ. ಅವರು ಮಾತನಾಡಿರುವ ವಿಡಿಯೋ ನನ್ನ ಬಳಿ ಇದೆ.

ಈ ರೀತಿ ಸೇನೆಗೆ ಅವಮಾನ ಮಾಡುವಂತಹ ಹೇಳಿಕೆಗಳನ್ನು ಅವರು ನೀಡಬಾರದಿತ್ತು. ಏರ್‍ಸ್ಟ್ರೈಕ್ ಕುರಿತಂತೆ ಸಾಕ್ಷಿ ಬಿಡುಗಡೆ ಮಾಡುವಂತೆ ಯಾರೂ ಕೇಳಿಲ್ಲ. ಡೋಝರ್ಸ್ (ದಾಖಲೆಗಳನ್ನು) ಬಿಡುಗಡೆ ಮಾಡುವಂತೆ ನಮ್ಮದೇನೂ ಒತ್ತಾಯವಿಲ್ಲ.

ಸೇನೆ ಕಾಂಗ್ರೆಸ್ ಮತ್ತು ಬಿಜೆಪಿಯದ್ದಲ್ಲ. ಅದು ನಮ್ಮ ಭಾರತದ ಸೇನೆ.

ಏರ್‍ಸ್ಟ್ರೈಕ್ ಬಗ್ಗೆ ದಾಖಲೆ ಬಿಡುಗಡೆ ಮಾಡುವುದು ಸೇನೆಗೆ ಬಿಟ್ಟ ವಿಚಾರ. ಯಾವ ಪಕ್ಷದವರೇ ಆಗಲಿ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳಬಾರದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ