ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಸೇನೆ ಉದ್ಧಟತನ ಮುಂದುವರೆಸಿದ್ದು, ಪಾಕ್ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು, 5 ವರ್ಷದ ಬಾಲಕ ಹಾಗೂ ಮಹಿಳೆ ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.
ರಜೌರಿ, ಪೂಂಚ್ ಮತ್ತು ಮೇಂದಾರ್ ವಲಯಗಳಲ್ಲಿ ಪಾಕ್ ಯೋಧರು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದು, ನಾಗರಿಕ ವಸತಿ ಪ್ರದೇಶದ ಮೇಲೆ ಶೆಲ್ ದಾಳಿ ಮಾಡುತ್ತಿದ್ದಾರೆ. ಪೂಂಚ್ ಜಿಲ್ಲೆಯಲ್ಲಿ ನಾಗರಿಕ ವಸತಿ ಪ್ರದೇಶದ ಮೇಲೆ ಮಾರ್ಟಾರ್ ಬಾಂಬ್ಗಳನ್ನು ಸಿಡಿಸುತ್ತಿದ್ದಾರೆ. ಹೋವಿಟ್ಜರ್ 105 ಎಂಎಂ ಸೇರಿ ಭಾರಿ ಗನ್ಗಳನ್ನು ಬಳಸಿ ಗುಂಡಿನ ಸುರಿಮಳೆಗೈಯ್ಯುತ್ತಿದ್ದಾರೆ.
ಈ ದಾಳಿಯಲ್ಲಿ ಪೂಂಚ್ನ ಸಲ್ಟೋರಿ ಎಂಬಲ್ಲಿ 9 ತಿಂಗಳ ಹೆಣ್ಣು ಮಗು, 5 ವರ್ಷದ ಬಾಲಕ ಹಾಗೂ ಒಬ್ಬ ಮಹಿಳೆ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ರುಬಾನಾ ಕೌಸರ್ (24), ಫಜಾನ್ (5) ಮತ್ತು ಶಬನಂ (9 ತಿಂಗಳ ಮಗು) ಮೃತರು. ರುಬಾನಾ ಕೌಸರ್ ಪತಿ ಮೊಹಮ್ಮದ್ ಯೂನಿಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನ್ಕೋಟ್ನಲ್ಲಿ ನಸೀಂ ಅಖ್ತರ್ ಎಂಬ ಮಹಿಳೆಗೂ ಪಾಕ್ ಯೋಧರು ಸಿಡಿಸಿದ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದಲ್ಲದೆ ಕೃಷ್ಣಘಾಟಿ ಮತ್ತು ಬಾಳಾಕೋಟ್ ಪ್ರದೇಶದಲ್ಲಿ ಕೂಡ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದೆ.
jammu-kashmir,Pakistani forces targeted civilian areas with heavy guns;2 Children, Mother Killed In Pakistan Shelling