ಮಾ.1 ಮತ್ತು 2ರಂದು 34ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಮೈಸೂರು, ಫೆ.28- ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಾಳೆ ಮತ್ತು ನಾಡಿದ್ದು (ಮಾ. 1 ಹಾಗೂ 2) ಎರಡು ದಿನಗಳ ಕಾಲ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.

ಸಮ್ಮೇಳನದಲ್ಲಿ ಮಹಾದ್ವಾರಗಳಿಗೆ ಹಿರಿಯ ಪತ್ರಕರ್ತರಾದ ಎಮ್.ಎಸ್.ಗುರುಪಾದಸ್ವಾಮಿ, ಜಿ.ವೆಂಕಟಕೃಷ್ಣಯ್ಯ, ಅಗರಂ ರಂಗಯ್ಯ ಅವರ ಹೆಸರು ಇಡಲಾಗಿದೆ.

ಪ್ರಧಾನ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಮಹಾಮಂಟಪಕ್ಕೆ ಡಿ.ವಿ.ಗುಂಡಪ್ಪ ಅವರ ಹೆಸರು ಇಡಲಾಗಿದೆ.

ಸಮ್ಮೇಳನದಲ್ಲಿ ಪತ್ರಿಕಾ ಛಾಯಾಗ್ರಾಹಕರು ತೆಗೆದಿರುವ ಅಪೂರ್ವ ಚಿತ್ರಗಳ ಪ್ರದರ್ಶನ, ಎಲ್‍ಇಡಿ ಪರದೆಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ವರದಿಗಳನ್ನು ಪ್ರಕಟಿಸಲಾಗುತ್ತದೆ. ಮೊಳೆಅಚ್ಚು ಮುದ್ರಣ ಯಂತ್ರ, ಹಳೆ ಕಾಲದ ರೇಡಿಯೋ, ಕ್ಯಾಮರಾ, ಟಿವಿಗಳ ಪ್ರದರ್ಶನವಿರುತ್ತದೆ.

ಆಕಾಶವಾಣಿ ತಾಂತ್ರಿಕ ಮಾಹಿತಿಯನ್ನು ಮೈಸೂರು ಆಕಾಶವಾಣಿ ತಂತ್ರಜ್ಞರು ಪ್ರಸ್ತುತಪಡಿಸುವರು ಅಲ್ಲದೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.

ನಾಳೆ ಸಂಜೆ ವಿಶ್ರಾಂತ ಪತ್ರಕರ್ತರಾದ ಡಾ. ಪಾಟೀಲಪುಟ್ಟಪ್ಪ ಹಾಗು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ