ನನಗೆ ಚುನಾವಣೆ ಸಾಕು ಎನಿಸಿದೆ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಹಾಸನ, ಫೆ.28- ನಾನು ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನ ಇನ್ನೂ ಮಾಡಿಲ್ಲ. ನನಗೆ ಚುನಾವಣೆ ಸಾಕು ಎನಿಸಿದೆ. ಎಷ್ಟು ಸಲ ಚುನಾವಣೆಗೆ ನಿಲ್ಲಲಿ. 65 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಹೇಳಿದರು.

ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಹಾಸನ ಜಿಲ್ಲೆಯಲ್ಲಿ ಸುದೀರ್ಘ ರಾಜಕಾರಣ ಕಂಡಿದ್ದೇನೆ. ರಾಮನಗರ ಮತ್ತು ಹಾಸನ ಎರಡೂ ಜಿಲ್ಲೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಎಲ್ಲ ಸಮಾಜದವರಿಗೂ ಚಿರಋಣಿಯಾಗಿದ್ದೇನೆ. ಎಲ್ಲರೂ, ಎಲ್ಲ ಸಮಾಜದವರೂ ಕೂಡ ನನ್ನ ಬೆಳವಣಿಗೆಗೆ ಕಾರಣಕರ್ತರು ಎಂದರು.

ನಾನು ದೇಶದ ರಾಜಕಾರಣ ನೋಡುತ್ತಿದ್ದೇನೆ. ಮೊದಲ ಸಲ ಬಿಜೆಪಿಗೆ ಕೇಂದ್ರದಲ್ಲಿ ಬೃಹತ್ ಬಲದ ಸಂಪೂರ್ಣ ಬಹುಮತದ ಸರ್ಕಾರವನ್ನು ಜನ ನೀಡಿದ್ದಾರೆ. ನಾಲ್ಕೂವರೆ ವರ್ಷಗಳಲ್ಲಿ ಕಾಶ್ಮೀರದಲ್ಲಿ ಮೂರು ಸರ್ಕಾರಗಳಿದ್ದವು. ದೀಪಾವಳಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಅಲ್ಲಿಗೆ ಹೋಗಿದ್ದರು. ಮೋದಿ ಅವರು ಕೇವಲ ಕಾಂಗ್ರೆಸ್ ದೂರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಜವಾಹರಲಾಲ್ ನೆಹರು ಅವರೂ ಸೇರಿದಂತೆ ಕಾಂಗ್ರೆಸ್‍ನವರನ್ನು ಅವಹೇಳನ ಮಾಡುವುದು ಅವರ ಉದ್ದೇಶವಾಗಿದೆ ಎಂದರು.

ಪ್ರಧಾನಿಯವರು ತನ್ನನ್ನು ತಾನೇ ಬಣ್ಣಿಸಿಕೊಳ್ಳುತ್ತಾರೆ. ಅವರ ಹಾವಭಾವಗಳನ್ನು ರಾಷ್ಟ್ರದ ಮಹಾಜನತೆ ನೋಡುತ್ತಿದ್ದಾರೆ. ಜನರು ಸಾಕಷ್ಟು ಪ್ರಬುದ್ಧರಿದ್ದಾರೆ. ನಾವು ಯಾರನ್ನೂ ಲಘುವಾಗಿ ಕಾಣಬಾರದು. ನಾನು ಪ್ರಧಾನಿಯಾಗಿದ್ದಾಗ ಹಠ ಮಾಡಿ ಕಾಶ್ಮೀರಕ್ಕೆ ಹೋಗಿದ್ದೆ. ಹಲವು ತೀರ್ಮಾನಗಳನ್ನು ಕೈಗೊಂಡಿದ್ದೆ. ನನ್ನ ದೇಶದ ಅವಿಭಾಜ್ಯ ಅಂಗ ಕಾಶ್ಮೀರದ ಜನತೆಯಲ್ಲಿ ವಿಶ್ವಾಸ ಭರಿಸುವ ಕೆಲಸ ಮಾಡಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದೆ. ಕಾಶ್ಮೀರದ ಪ್ರಗತಿಗೆ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಒಂದು ಸಣ್ಣ ಘಟನೆಯೂ ನಡೆದಿರಲಿಲ್ಲ ಎಂದರು.

ತೃತೀಯ ವ್ಯಕ್ತಿ ಮಧ್ಯಸ್ಥಿಕೆ ಇಲ್ಲದೆ ನಾವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿದ್ದೆವು. ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್ ಬಿಡುವ ಪ್ರಯತ್ನ ಮಾಡಿದ್ದರು. ನಂತರ ಕಾರ್ಗಿಲ್ ಯುದ್ಧದಲ್ಲಿ ನಾವು ಗೆದ್ದಿದ್ದೇವೆ ಎಂದರು. ಯಾವ ಬೊಫೋರ್ಸ್ ಹಗರಣ ಮನೆಮಾತಾಗಿತ್ತೋ ಆ ಬೋಫೋರ್ಸ್‍ನಲ್ಲೇ ಯುದ್ಧ ಗೆದ್ದೆವು. ಈಗ ರಫೇಲ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

ಈ ಎರಡೂ ಪಕ್ಷಗಳ ತಿಕ್ಕಾಟದಿಂದಾಗಿ ನಮ್ಮ ದೇಶದ ಐಕ್ಯತೆ ತೋರುವುದರಲ್ಲಿ ಎಡವುತ್ತಿದ್ದೇವೆ. ದೇಶ ಈಗ ಸಂಕಷ್ಟದಲ್ಲಿದೆ. ವಾಜಪೇಯಿ ಸರ್ಕಾರದಲ್ಲಿ ಉಗ್ರವಾದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆ ಉಗ್ರವಾದಿ ಈಗ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದಾನೆ ಎಂದರು.

ಬಿಜೆಪಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಬಗ್ಗೆ ಕಿಡಿಕಾರುತ್ತಿದ್ದಾರೆ. ನೆಹರು ಬಗ್ಗೆ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಅವರನ್ನು ಕೀಳಾಗಿ ಕಾಣಬೇಡಿ. ಅವರು ದೇಶ ಕಂಡ ಉತ್ತಮ ನಾಯಕರು. ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ದೇವೇಗೌಡರು ಹೇಳಿದರು.

ಉಗ್ರವಾದ ಎಂಬುದು ಪ್ರಪಂಚದ ಒಂದು ದೊಡ್ಡ ಸಮಸ್ಯೆ. ವಿಶ್ವಸಂಸ್ಥೆಯಲ್ಲಿಯೇ ಇದನ್ನು ಒಪ್ಪಿಕೊಳ್ಳಲಾಗಿದೆ. ದೇಶದಲ್ಲಿ ಚುನಾವಣೆ ಮುಂದೂಡುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ. ಆದರೆ, ಕಾಶ್ಮೀರದಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ