ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಅಮೆರಿಕಾ

ವಾಷಿಂಗ್ಟನ್, ಫೆ.27- ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಒಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರ ಅಮೆರಿಕ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ.

ಭಯೋತ್ಪಾದಕರಿಗೆ ನಿಮ್ಮ ನೆಲ ಸುರಕ್ಷಿತ ಸ್ವರ್ಗವಾಗಿದೆ. ನಿಮ್ಮ ಮಣ್ಣಿನಿಂದಲೇ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕುವಂತೆ ಪದೇ ಪದೇ ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಲೇ ಬಂದಿರುವ ಅಮೆರಿಕ, ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಪಾಕ್ ಬಗ್ಗೆ ಮತ್ತಷ್ಟು ಕೆಂಡಾಮಂಡಲವಾಗಿದೆ.

ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಇಂದು ಬೆಳಗ್ಗೆ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಶಾ ಮೆಹಮೂದ್ ಖುರೇಷಿ ಅವರಿಗೆ ದೂರವಾಣಿ ಕರೆ ಮಾಡಿ ಈ ವಿಷಯದ ಬಗ್ಗೆ ಬಿಸಿ ಮುಟ್ಟಿಸಿದ್ದಾರೆ.

ಭಯೋತ್ಪಾದಕರನ್ನು ದಮನ ಮಾಡುವಂತೆ ಅಮೆರಿಕ ಪುನರಾವರ್ತಿತ ಮನವಿಗಳನ್ನು ಮಾಡುತ್ತಲೇ ಬಂದಿದ್ದರೂ ಪಾಕಿಸ್ತಾನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವರು ಪಾಕಿಸ್ತಾನದ ತಮ್ಮ ಸಹವರ್ತಿ ಜತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ನೆಲದಲ್ಲೇ ಕಾರ್ಯನಿರ್ವಹಿಸುತ್ತ ನೆರೆಹೊರೆ ರಾಷ್ಟ್ರಗಳಿಗೆ ಕಂಟಕಪ್ರಾಯವಾಗಿರುವ ಭಯೋತ್ಪಾದಕರ ಜಾಲಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಪೊಂಪಿಯೋ ಖುರೇಷಿ ಅವರಿಗೆ ಸ್ಪಷ್ಟ ತಾಕೀತು ಮಾಡಿದ್ದಾರೆ.

ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಐರೋಪ್ಯ ಸಮುದಾಯ ಪುಲ್ವಾಮಾ ದಾಳಿಯನ್ನು ಅತ್ಯುಗ್ರವಾಗಿ ಖಂಡಿಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿ ಭಾರತಕ್ಕೆ ಬೆಂಬಲ ನೀಡಿರುವ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕ ಇಸ್ಲಮಾಬಾದ್‍ಗೆ ಗಂಭೀರ ತಾಕೀತು ಮಾಡಿರುವುದು ಇಲ್ಲಿ ಗಮನಾರ್ಹ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ