2.19ಲಕ್ಷ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ-ಸಚಿವ ಬಂಡೆಪ್ಪ ಕಾಶಂಪುರ

ಬೆಂಗಳೂರು, ಫೆ.25- ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಪಡೆದಿದ್ದ 2.19ಲಕ್ಷ ರೈತರ ಖಾತೆಗಳಿಗೆ ಸಾವಿರದ ಎಂಭತ್ತೆಂಟು ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಇಲಾಖೆ 2600ಕೋಟಿ ರೂಪಾಯಿಯನ್ನು ಅಪೆಕ್ಸ್ ಬ್ಯಾಂಕಿಗೆ ನೀಡಿದ್ದು ಸದ್ಯದಲ್ಲೇ ಈ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಸಹಕಾರಿ ಬ್ಯಾಂಕುಗಳ ರೈತರ ಸಾಲಮನ್ನಾ ಯೋಜನೆ ಮುಂದಿನ ಜೂನ್ ಅಂತ್ಯದೊಳಗೆ ಪೂರ್ಣಗೊಳಲಿದೆ ಎಂದು ಹೇಳಿದರು.

ಸಹಕಾರಿ ಬ್ಯಾಂಕುಗಳ ಮೂಲಕ 22ಲಕ್ಷ ರೈತರು ಸಾಲ ಪಡೆದಿದ್ದು 18.71ಲಕ್ಷ ರೈತರು 1ಲಕ್ಷ ರೂ. ಸಾಲಮನ್ನಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಸಾಲಮನ್ನಾ ಯೋಜನೆಗೆ ಸಂಬಂಧಪಟ್ಟಂತೆ ದೇಶದಲ್ಲಿ ಮೊದಲ ಬಾರಿಗೆ ಉತ್ತಮವಾದ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು ಈ ಮೂಲಕ ರೈತರ ಮಾಹಿತಿಯನ್ನು ಪಡೆದು ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಕಳೆದ ಜನವರಿ ಅಂತ್ಯದ ವೇಳೆಗೆ 4ಲಕ್ಷ 8ಸಾವಿರ ರೈತರ ಸಾಲ ಮರುಪಾವತಿಯಾಗಬೇಕಿತ್ತು. ಈ ಪೈಕಿ 3.87ಲಕ್ಷ ರೈತರು ಸಾಲಮನ್ನಾ ಯೋಜನೆ ಪಡೆಯಲು ಅರ್ಹರಾಗಿದ್ದಾರೆ. ರೈತರು ಸಾಲ ಮರುಪಾವತಿಸಬೇಕಾದರೆ ಆಯಾಯ ತಿಂಗಳಿಗೆ ತಕ್ಕಂತೆ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದ ಅವರು ಸಹಕಾರಿ ಬ್ಯಾಂಕುಗಳ 9.448ಕೋಟಿ ರೂ. ರೈತರ ಸಾಲಮನ್ನಾವಾಗಲಿದೆ ಎಂದು ತಿಳಿಸಿದರು.

843ಕೋಟಿ ರೂ. ಬಿಡುಗಡೆ:
ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಸಾಲಕ್ಕೆ ಸಂಬಂಧಿಸಿದಂತೆ ಜನವರಿ ಅಂತ್ಯಕ್ಕೆ 843ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2ಲಕ್ಷ ರೈತರ ಬ್ಯಾಂಕ್ ಖಾತೆಗೆ ಈ ಹಣ ಜಮಾವಣೆಯಾಗಿದೆ. ಇನ್ನು 5ಲಕ್ಷ ರೈತರಿಗೆ ಸಾಲಮಾನ್ನ ಯೋಜನೆಯಡಿ ಸದ್ಯದಲ್ಲೇ 1300ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ