ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಬೆದರಿಕೆ ಕರೆ: ಹೈ ಅಲರ್ಟ್

ಚಾಮರಾಜನಗರ: ಚಾಮರಾಜನಗರ ರೈಲ್ವೆ ನಿಲ್ದಾಣ, ಬಾಗಲಕೋಟೆ ಹಾಗೂ ಮೈಸೂರು ನಿಲ್ದಾಣಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ ಹಿನ್ನಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಕಟ್ತೆಚ್ಚರ ವಹಿಸಲಾಗಿದೆ.

ತಡರಾತ್ರಿ 2 ಗಂಟೆಗೆ ಎಡಿಜಿಪಿಯವರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ಚಾಮರಾಜನಗರ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ನಿಷ್ಕ್ರೀಯದಳ, ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಆದರೆ ಮುನ್ನಚ್ಚರಿಕಾ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಚಾಮರಾಜನಗರ ಎಸ್ ಪಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರು ಕೇಂದ್ರ ರೈಲ್ವೆ ಕಂಟ್ರೋಲ್ ರೂಂಗೆ ತಡರಾತ್ರಿ ಸುಮಾರು 1.30ಕ್ಕೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಬಾಗಲಕೋಟೆ ನಿಲ್ದಾಣಕ್ಕೂ ಹುಸಿ ಬಾಂಬ್​ ಕರೆ ಬಂದಿದ್ದು, ಅಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದರು. ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

Chamarajanagar,mysore, railway station,bomb threat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ