ಅಧಿವೇಶನದಲ್ಲಿ ಲೇಖಾನುದಾನಕ್ಕೆ ಒಪ್ಪಿಗೆ ಬೀಸೊದೊಣ್ಣೆಯಿಂದ ಪಾರಾದ ಸರ್ಕಾರ

ಬೆಂಗಳೂರು,ಫೆ.14- ಅಧಿವೇಶನದಲ್ಲಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವ ಮೂಲಕ ಮೈತ್ರಿ ಸರ್ಕಾರ ಬೀಸೊದೊಣ್ಣೆಯಿಂದ ಪಾರಾದಂತಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ ಎಂಬ ವಿಚಾರಕ್ಕೂ ತೆರೆಬಿದ್ದಂತಾಗಿದೆ.

ಆಪರೇಷನ್ ಕಮಲದ ಮೂಲಕ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲಾಗುತ್ತಿದ್ದು, ಮೈತ್ರಿ ಸರ್ಕಾರ ಪತನವಾಗುತ್ತದೆ ಎಂಬ ವದಂತಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡಿತ್ತಲ್ಲದೆ ಬಹಳಷ್ಟು ಚರ್ಚೆಯೂ ನಡೆದಿತ್ತು.

ಸಮ್ಮಿಶ್ರ ಸರ್ಕಾರ ಬಜೆಟ್ ಮಂಡಿಸುವುದು ಕೂಡ ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು.ಆದರೆ ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳು ರಾಜಕೀಯ ಪರಿಸ್ಥಿತಿಯನ್ನು ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸಿ ತಾತ್ಕಾಲಿಕ ಯಶಸ್ಸನ್ನು ಕಂಡಿದೆ.

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ದಿನವೇ ಸಿಡಿಸಿದ ಆಡಿಯೋ ಬಾಂಬ್ ಬಿಜೆಪಿಯ ತಂತ್ರಗಾರಿಕೆಗೆ ಹಿನ್ನಡೆಯನ್ನುಂಟು ಮಾಡಿದೆ. ಅಂದೇ ಮಿತ್ರ ಪಕ್ಷಗಳಿಗೆ ಆನೆಬಲ ಬಂದಾಂತಾಗಿತ್ತು.

ಅಧಿವೇಶನದಲ್ಲಿ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳು ಚರ್ಚೆಗೆ ಬರಲಿಲ್ಲ. ಆದರೆ ಆಡಿಯೋ ಪ್ರಕರಣ ವಿಸ್ತೃತ ಹಾಗೂ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು.ಇದರಿಂದ ಬಿಜೆಪಿ ತನ್ನ ಕಾರ್ಯತಂತ್ರವನ್ನೇ ಬದಲಿಸಿಕೊಳ್ಳುವಂತಾಯಿತು.

ಆಡಳಿತ ಪಕ್ಷದ ಅತೃಪ್ತ ಶಾಸಕರು ಕೂಡ ಸದನಕ್ಕೆ ಹಾಜರಾಗುವ ಮೂಲಕ ಸರ್ಕಾರದ ಆತಂಕಗಳನ್ನು ದೂರ ಮಾಡಿದರು.ಹೀಗಾಗಿ ಕಾಂಗ್ರೆಸ್, ಜೆಡಿಎಸ್‍ನ ಸಚಿವರು, ಶಾಸಕರಲ್ಲಿ ಹರ್ಷ ಉಂಟಾಗಿದ್ದರೆ, ಬಿಜೆಪಿಯಲ್ಲಿ ನಿರಾಸೆ ಆವರಿಸಿದೆ.

ಬಿಜೆಪಿಯ ನಿರೀಕ್ಷೆಗಳು ಈ ಅಧಿವೇಶನದಲ್ಲಿ ಸಂದರ್ಭದಲ್ಲಿ ನುಚ್ಚುನೂರಾಗಿವೆ. ಆದರೆ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಎದುರಿಸಿದ ಕಾಂಗ್ರೆಸ್-ಜೆಡಿಎಸ್ ಸದ್ಯದ ಮಟ್ಟಿಗೆ ಗೆಲುವನ್ನು ಸಾಧಿಸಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಒಟ್ಟಾರೆ ಸರ್ಕಾರ ಇರುತ್ತೋ ಹೋಗುತ್ತೋ ಎಂಬ ಅನುಮಾನಗಳು ಸದ್ಯಕ್ಕೆ ದೂರವಾಗಿದ್ದು, ಶಾಸಕರನ್ನು ಸೆಳೆದು ಪಕ್ಷಾಂತರಗೊಳಿಸುವ ಪ್ರಯತ್ನಕ್ಕೂ ತಾತ್ಕಾಲಿಕ ತಡೆಯೊಡ್ಡಿದಂತಾಗಿದೆ. ಹೀಗಾಗಿ ಮೈತ್ರಿ ಸರ್ಕಾರದ ಹಾದಿ ಸುಗಮವಾದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ