ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು,ಫೆ.14-ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಮನೆ ಮೇಲೆ ದಾಳಿ ಮಾಡಿ, ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದ ನಿಯೋಗ ಇಂದು ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಪ್ರಕರಣ ರಾಜಭವನದ ಅಂಗಳಕ್ಕೆ ಕಾಲಿಟ್ಟಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಮುಖಂಡರಾದ ಕೆ.ಎಸ್.ಈಶ್ವರಪ್ಪ , ಸುರೇಶ್‍ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಎಲ್ಲ ಸದಸ್ಯರು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿ.ಆರ್.ವಾಲಾಗೆ ದೂರು ನೀಡಿದರು.

ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದ್ದು, ಶಾಸಕರ ಮನೆ ಮೆಲೆ ಕಲ್ಲು ತೂರಾಟ ನಡೆಸಿ, ಅವರ ಬೆಂಬಲಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಾಸನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣವೇ ಮಧ್ಯಪ್ರವೇಶ ಮಾಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಈಗಲೂ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಪ್ರಾಣಭೀತಿ ಇದೆ. ಕೆಲವು ಕಿಡಿಗೇಡಿಗಳು ದೂರವಾಣಿ ಮೂಲಕ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಹಲ್ಲೆಗೊಳಗಾಗಿರುವ ಬೆಂಬಲಿಗನ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಸರ್ಕಾರದ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದರಿಂದ ಮುಖ್ಯಮಂತ್ರಿಗೆ ಕಾನೂನು ಸುವ್ಯವಸ್ತೆ ಕಾಪಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

ಕುಮಾರಸ್ವಾಮಿ ಕುಮ್ಮಕ್ಕು:
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಹಾಸನದಲ್ಲಿ ನಡೆದಿರುವ ಘಟನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಮ್ಮಕ್ಕೇ ನೇರ ಕಾರಣ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಮನೆಗೆ ನುಗ್ಗಿ ಕಲ್ಲು ತೂರಾಟ ಮಾಡಿರುವುದಲ್ಲದೆ ಹಾಸನ ಬಿಟ್ಟು ಹೋಗುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಸರ್ಕಾರದ ಕುಮ್ಮಕ್ಕಿಲ್ಲದೆ ಇದೆಲ್ಲ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪೆÇಲೀಸ್ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಿನ್ನೆಯಿಂದ ಪ್ರೀತಂ ಗೌಡಗೆ ಅನೇಕರು ದೂರವಾಣಿಯಲ್ಲಿ ಹಾಸನ ಖಾಲಿ ಮಾಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ.ಅವರ ತಾಯಿ ಮಗನಿಗೆ ಏನಾಗಲಿದೆಯೋ ಎಂದು ಹೆದರಿಕೊಂಡಿದ್ದಾರೆ.ರಾಜ್ಯದಲ್ಲಿ ಶಾಸಕರೊಬ್ಬರಿಗೆ ರಾಜಾರೋಷವಾಗಿ ಪ್ರಾಣಬೆದರಿಕೆ ಹಾಕುತ್ತಿರುವುದು ಇದೇ ಮೊದಲು ಎಂದು ಆಪಾದಿಸಿದರು.
ಘಟನೆ ನಡೆದ ಬಳಿಕ ನಾನು ಅಲ್ಲಿನ ಐಜಿಪಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲ್ಲು ತೂರಾಟ ನಡೆಸುವವರ ಮೇಲೆ ದಾಖಲಾಗಿರುವ ಎಫ್‍ಐಆರ್‍ಗೆ ತಕ್ಷಣವೇ ಜಾಮೀನು ಸಿಗುತ್ತದೆ. ಹೆಣ್ಣುಮಗಳಿಗೆ ಕಿರುಕುಳ ನೀಡಲಾಗಿದೆ ಎಂದು ಪ್ರತಿಯಾಗಿ ದೂರು ದಾಖಲಿಸಿದ್ದಾರೆ. ಇದೂ ಕೂಡ ರಾಜಕೀಯ ಷಡ್ಯಂತರ. ಮುಖ್ಯಮಂತ್ರಿಗಳ ಸೂಚನೆಯಂತೆಯೇ ದೂರು ದಾಖಲಾಗಿರುವುದರಿಂದ ಇದರ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಪಾಲರಿಗೆ ಎಫ್‍ಐಆರ್‍ನ ಪ್ರತಿಗಳನ್ನು ನೀಡಲಾಗುವುದು. ಜೆಡಿಎಸ್‍ನ ದಬ್ಬಾಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಮುಂದಿನ ವಾರ ಬಿಜೆಪಿಯ ಎಲ್ಲಾ ಶಾಸಕರು ಹಾಸನ ಜಿಲ್ಲೆಗೆ ತೆರಳಿ ಕಾರ್ಯಕರ್ತರಿಗೆ ಧೈರ್ಯ ತುಂಬಲಿದ್ದೇವೆ. ಜೆಡಿಎಸ್‍ನ ಗೂಂಡಾ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದರು.

ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾರೇ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಆದರೆ ನಿನ್ನೆ ಹಾಸನದಲ್ಲಿ ನಮ್ಮ ಶಾಸಕ ಪ್ರೀತಂ ಗೌಡ ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದು ಸರಿಯಲ್ಲ. ಅವರ ತಾಯಿಗೆ ಕೊಲೆ ಬೆದರಿಕೆ ಹಾಕುತ್ತಾರೆ ಎಂದರೆ ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ ಇಲ್ಲವೋ ಸತ್ತಿದೆಯೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ರಾಜ್ಯಪಾಲರಿಗೆ ಘಟನೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಬಗ್ಗೆ ವರದಿ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ