ಅಥಿತಿ ಉಪನ್ಯಾಸಕರಿಂದ ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ

ಬೆಂಗಳೂರು, ಫೆ.9-ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಫೆ.18ರಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಲು ಅತಿಥಿ ಉಪನ್ಯಾಸಕರು ನಿರ್ಧರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಡಿ.ಚಲವಾದಿ ಮಾತನಾಡಿ, ಯುಜಿಸಿ ನಿಯಮಾವಳಿ ಪ್ರಕಾರ ಮಾಸಿಕ 50 ಸಾವಿರ ರೂ.ವೇತನ ನಿಗದಿಪಡಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವವರೆಗೆ ಖಾಯಂ ಉಪನ್ಯಾಸಕರನ್ನು ನೇಮಿಸಲು ಅಧಿಸೂಚನೆ ಹೊರಡಿಸಬಾರದು ಎಂದು ಆಗ್ರಹಿಸಿದರು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ರಾಜ್ಯ ಸರ್ಕಾರ ಮಾಸಿಕ 13 ಸಾವಿರ ರೂ.(ಎನ್‍ಇಟಿ-ಎಸ್‍ಎಲ್‍ಇಟಿ ಅರ್ಹತೆ ಹೊಂದಿದವರಿಗೆ) ಮಾಸಿಕ ವೇತನ ನೀಡಲಾಗುತ್ತಿದೆ. ಸ್ನಾತಕೋತ್ತರ ಪದವೀಧರರಿಗೆ 11 ಸಾವಿರ ರೂ. ನೀಡಲಾಗುತ್ತಿದೆ., ಆ ವೇತನವನ್ನು ಆರು ತಿಂಗಳಿಗೊಮ್ಮೆ ಉನ್ನತ ಶಿಕ್ಷಣ ಇಲಾಖೆ ಪಾವತಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಇಷ್ಟು ಕನಿಷ್ಠ ಸಂಬಳ ಪಡೆದು ಕುಟುಂಬ ನಿರ್ವಹಣೆ ಮಾಡುವುದು ತುಂಬಾ ಕಷ್ಟ.ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ನ್ಯಾಯಯುತವಾಗಿದೆ.ಕೂಲಿ ಕಾರ್ಮಿಕರು ಕೂಡ 20 ರಿಂದ 30 ಸಾವಿರ ಸಂಬಳ ಪಡೆಯುತ್ತಿದ್ದಾರೆ.ಅಂತಹದ್ದರಲ್ಲಿ ನಾವು ಇಷ್ಟು ಕಷ್ಟ ಪಟ್ಟು ಓದಿ, ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿದ್ದರೂ ನಮಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿದೆ.ಖಾಯಂ ಉಪನ್ಯಾಸಕರಿಗೆ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ, ನಾವು ಅತ್ಯಂತ ಕಡಿಮೆ ಪಡೆಯುತ್ತಿದ್ದೇವೆ. ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಡಾ.ನಾಗೇಶ್, ಉಪಾಧ್ಯಕ್ಷೆ ಸುಮಲತಾ.ಆರ್, ಪ್ರಧಾನಕಾರ್ಯದರ್ಶಿ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ