ಅನಿಶ್ಚಿತತೆ ನಡುವೆಯೇ ‘ಬಜೆಟ್’ ಮಂಡನೆ; ಎಲ್ಲರ ಚಿತ್ತ ಬಜೆಟ್ ನತ್ತ

ಬೆಂಗಳೂರುಪ್ರತಿಬಾರಿ ಬಜೆಟ್ ಎಂದರೆ ಏನೆಲ್ಲಾ ಕೊಡುಗೆ ಸಿಗುತ್ತೆ ಎಂಬ ಬಗ್ಗೆ ಯೋಚಿಸಲಾಗುತ್ತದೆ. ಆದರೆ ಈ ಬಾರಿಯ ಬಜೆಟ್ ಬಜೆಟ್ ಮಂಡನೆಯಾಗುತ್ತದೆಯೇ? ಮೈತ್ರಿ ಸರ್ಕಾರದ ನೆಮ್ಮದಿ ಕಸಿದಿರುವ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆಯೇ? ಅತೃಪ್ತ ಶಾಸಕರ ಮನವೊಲಿಸಲು ದೋಸ್ತಿ ಕಾರ್ಯತಂತ್ರ ಯಶಸ್ವಿಯಾಗುವುದೇ? ಎಂಬ ಹಲವು ಪ್ರಶ್ನೆಗಳು ಕುತೂಹಲ ಮೂಡಿಸಿವೆ. ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಇಂದು ಉತ್ತರ ದೊರೆಯಲಿದೆ. ಒಂದರ್ಥದಲ್ಲಿ ದೋಸ್ತಿ ಸರ್ಕಾರಕ್ಕೆ ಇದೊಂದು ಅಗ್ನಿಪರೀಕ್ಷೆಯಾಗಿದೆ.

ಈ ಎಲ್ಲಾ ಅನಿಶ್ವಿತತೆಯ ನಡುವೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಧ್ಯಾಹ್ನ 12:30ಕ್ಕೆ ಮಂಡಿಸಲಿದ್ದಾರೆ.

ದೋಸ್ತಿ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ಲಾನ್:
ದೋಸ್ತಿ ಸರಕಾರದ ಭವಿಷ್ಯ ನಿರ್ಧರಿಸುವ ಅತ್ಯಂತ ಮಹತ್ವದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಗೆ ಅತೃಪ್ತ ಶಾಸಕರು ಗೈರಾದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಜತೆಗೆ ಸತತ ಗೈರಾಗಿರುವ ಶಾಸಕರಿಗೆ ನೀಡಿರುವ ಮೂರು ನೋಟಿಸಿನ ಪ್ರತಿಯೊಂದಿಗೆ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮಕೈಗೊಳ್ಳಲು ಸ್ಪೀಕರ್​ಗೆ ಪತ್ರವನ್ನೂ ಸಿದ್ಧಪಡಿಸಿಕೊಂಡಿದೆ. ಆದರೆ ಶಾಸಕಾಂಗ ಪಕ್ಷದ ಸಭೆಗೆ ಬಾರದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಸಾಧ್ಯವಿಲ್ಲ. ಹೆಚ್ಚೆಂದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಬಹುದು. ಶಾಸನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲವೆಂಬ ವಾದವೂ ಇದೆ.

ಬಜೆಟ್ ಮಂಡನೆ ಕಾರ್ಯಕಲಾಪದ ವೇಳೆ ಲೋಕಸಭೆಯ ಮಾದರಿಯನ್ನೇ ಅನುಸರಿಸಲು ಮುಂದಾಗಿರುವ ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಭಾಷಣದ ಪೂರ್ತಿ ಪ್ರತಿ ಓದಿ ಮುಗಿಸುವವರೆಗೂ ಬಜೆಟ್ ಪುಸ್ತಕಗಳನ್ನು ಶಾಸಕರಿಗೆ ನೀಡದಿರಲು ನಿರ್ಧರಿಸಿದ್ದಾರೆ.

ಬಜೆಟ್ ಮಂಡನೆ ವೇಳೆ ವಿಪಕ್ಷದವರು ಬಜೆಟ್ ಪ್ರತಿಗಳನ್ನು ಹರಿದುಹಾಕಿ ಪ್ರತಿಭಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಮುಕ್ತಾಯವಾಗುವವರೆಗೂ ವಿಪಕ್ಷಗಳಿಗೆ ಬಜೆಟ್ ಪ್ರತಿ ಕೊಡದಿರಲು ಕುಮಾರಸ್ವಾಮಿ ನಿಶ್ಚಿಯಿಸಿದ್ದು, ಬಜೆಟ್ ಮಂಡನೆ ಮುಗಿದ ಬಳಿಕವಷ್ಟೇ ಪ್ರತಿಗಳನ್ನು ಹಂಚಲು ನಿರ್ಧಾರ ಮಾಡಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರೂ ಕೂಡ ಇಂತಹ ಕ್ರಮವನ್ನು ಖಚಿತಪಡಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ