ಬಾತ್​ರೂಮ್​ನಲ್ಲಿ ಜಾರಿ ಬಿದ್ದ ದೇವೇಗೌಡರು: ಕಾಲಿಗೆ ಪೆಟ್ಟು

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬಾತ್ ರೂಮ್​ಗೆ ಹೋಗಿದ್ದ ವೇಳೆ ಜಾರಿ ಬಿದ್ದಿದ್ದು, ಇದರಿಂದಾಗಿ ಬಲಗಾಲಿಗೆ ಸಣ್ಣ ಪ್ರಮಾಣದ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದು, ವಿಶ್ರಾಂತಿ ಪಡೆಯುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ಜಾರಿ ಬಿದ್ದ ಪರಿಣಾಮ ಕಾಲಿಗೆ ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದ್ದು, ದೇವೇಗೌಡರು ಆರಾಮವಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಕಾಲು ಉಳುಕಿದ್ದು, ಮೂಳೆಗೆ ಯಾವುದೇ ರೀತಿಯ ಪೆಟ್ಟಾಗಿಲ್ಲ. ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ದೇವೇಗೌಡರಿಗೆ ಸದ್ಯ ಸ್ವಲ್ಪ ವಿಶ್ರಾಂತಿ ಬೇಕಾಗಿದ್ದು, ಗೌಡರು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆಯಲಿದ್ದಾರೆ. ವಿಷಯ ತಿಳಿದ ತಕ್ಷಣ ದೇವೇಗೌಡರ ಪುತ್ರ ಡಾ. ರಮೇಶ್ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿ ತಮ್ಮ ತಂದೆಯ ಯೋಗಕ್ಷೇಮ ವಿಚಾರಿಸಿದ್ದಾರೆ. ಮೂಳೆ ತಜ್ಞ ಡಾ. ಚಂದ್ರಶೇಖರ್ ಮನೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ