ವಿವಿಐಪಿ ಹೆಲಿಕಾಪ್ಟರ್ ಹಗರಣ: ಭಾರತಕ್ಕೆ ಗಡಿಪಾರಾಗಿದ್ದ ಇಬ್ಬರು ಅಧಿಕಾರಿಗಳ ಬಂಧನ

ದುಬೈ/ನವದೆಹಲಿ, ಜ.31- ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಂಯುಕ್ತ ಗಣರಾಜ್ಯ(ಯುಎಇ) ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದ್ದು ಅವರಿಬ್ಬರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ, ಆರೋಪಿ ಕ್ರಿಶ್ಚಿಯನ್ ಮೈಕೆಲ್‍ನನ್ನು ದುಬೈನಿಂದ ಗಡಿಪಾರು ಮಾಡಿದ ಎರಡು ತಿಂಗಳ ಬಳಿಕ ಮತ್ತಿಬ್ಬರು ಆರೋಪಿಗಳನ್ನು ಯುಎಇದಿಂದ ಭಾರತಕ್ಕೆ ಕರೆತರಲಾಗಿದ್ದು , ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಹಗರಣದ ಪ್ರಮುಖ ಆರೋಪಿಗಳು ಎನ್ನಲಾದ ದುಬೈ ಮೂಲದ ಅಕೌಂಟೆಂಟ್ ರಾಜೀವ್ ಸಕ್ಸೇನಾ ಹಾಗೂ ದೀಪಕ್ ತಲ್ವಾರ್ ಅವರನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಿದ್ದು, ಅವರನ್ನು ವಿಶೇಷ ವಿಮಾನದ ಮೂಲಕ ಜಾರಿ ನಿರ್ದೇಶನಾಲಯ, ವಿದೇಶಾಂಗ ಸಚಿವಾಲಯ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣೆ ದಳದ(ರಿಸರ್ಚ್ ಆ್ಯಂಡ್ ಅನಲಿಸಿಸ್ ವಿಂಗ್-ರಾ) ಅಧಿಕಾರಿಗಳು ಕರೆದುಕೊಂಡು ಬಂದರು. ನಂತರ ವಿಮಾನ ನಿಲ್ದಾಣದಲ್ಲಿ ಅವರಿಬ್ಬರನ್ನು ಇಡಿ ಅಧಿಕಾರಿಗಳು ಬಂಧಿಸಿದರು.

ದುಬೈನಲ್ಲಿ ವಾಸವಾಗಿದ್ದ ಅಕೌಂಟೆಂಟ್ ರಾಜೀವ್‍ಗೆ ಅಗಸ್ಟಾ ವೆ¸್ಟïಲ್ಯಾಂಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಹಲವು ಬಾರಿ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಅವರು ತನಿಖೆಗೆ ಸಹಕರಿಸಿರಲಿಲ್ಲ. ಈಗ ರಾಜೀವ್ ಸಕ್ಸೇನಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ದುಬೈನಿಂದ ಕರೆದುಕೊಂಡು ಬರಲಾಗಿದೆ.

ರಾಜೀವ್ ಸಕ್ಸೇನಾ ಹಾಗೂ ಪತ್ನಿ ಶಿವಾನಿ ಸಕ್ಸೇನಾ ಮತ್ತು ಅವರ ದುಬೈ ಮೂಲದ ಸಂಸ್ಥೆ ಶೇರುಗಳ ವಿಚಾರದಲ್ಲಿ ಅಕ್ರಮ ನಡೆಸಿದ್ದು, ಶಿವಾನಿ ಸಕ್ಸೇನಾ ಅವರನ್ನು 2017ರಲ್ಲಿ ಚೆನ್ನೈ ಏರ್ಪೋರ್ಟ್‍ನಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ