ಫೆ.21ರಿಂದ 28ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ

ಬೆಂಗಳೂರು,ಜ.30- ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವು ಫೆ.21ರಿಂದ 28ರವರೆಗೆ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಇಂದು ವಾರ್ತಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವು ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ನಿರ್ಮಾಪಕರು ಮತ್ತಿತರ ಗಣ್ಯರು ಆಗಮಿಸಲಿದ್ದು, ಇದೇ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ನಗರದ ಓರಿಯನ್ ಮಾಲ್‍ನಲ್ಲಿ ಪಿವಿರ್ ಸಿನಿಮಾಸ್‍ನ 11 ಪರದೆಗಳಲ್ಲಿ ಫೆ.22ರಿಂದ ಚಿತ್ರಪ್ರದರ್ಶನ ಆರಂಭವಾಗಲಿದ್ದು, ಉತ್ಸವದ ವಿವಿಧ ಭಾಗಗಳಲ್ಲಿ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ರಾಷ್ಟ್ರಪಿತ ಗಾಂಧೀಜಿಯವರ 150ನೇ ಜನ್ಮ ದಿನೋತ್ಸವದ ಅಂಗವಾಗಿ ಶಾಂಬೆನಗಲ್‍ರವರ ಮೇಕಿಂಗ್ ಆಫ್ ಮಹಾತ್ಮ, ಫೀರೋಜ್ ಅಬ್ಬಾಸ್ ಖಾನ್‍ರ ಗಾಂಧಿ ಮೈ ಫಾದರ್, ಗಿರೀಶ್ ಕಾಸರವಳ್ಳಿ ಅವರ ಕೂರ್ಮಾವತಾರ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ಇತ್ತೀಚೆಗೆ ನಿಧನರಾದ ನಟ ಅಂಬರೀಶ್, ಮೃಣಾಲ್ ಸೇನ್, ಎಂ.ಭಕ್ತವತ್ಸಲಂ, ಎಂ.ಎನ್.ವ್ಯಾಸರಾವ್, ಸಿ.ಎಚ್.ಲೋಕನಾಥ್ ಅವರಿಗೆ ಶ್ರದ್ದಾಂಜಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೆಸರಾಂತ ಛಾಯಾಗ್ರಾಹಕ ಜಿ.ಎಚ್.ಭಾಸ್ಕರ್ ಅವರ ಸಲಹೆಯೊಂದಿಗೆ ಬೆಂಗಳೂರು ಮೂಲದ ಸಾಕ್ಷ್ಯಚಿತ್ರ ನಿರ್ಮಾತೃ ವಿನೋದ್‍ರಾಜ್, ಉತ್ಸವದ ಪ್ರಾಕೃತಿಕ ವಿಕೋಪ ವಿಷಯ ಕುರಿತಂತೆ ಸಂಗ್ರಹಿಸಿದ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಾರ್ತಾ ಇಲಾಖೆ ಕಾರ್ಯದರ್ಶಿ ವಿ.ಪಂಕಜ್‍ಕುಮಾರ್ ಪಾಂಡೆ, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್, ಕಲಾತ್ಮಕ ನಿರ್ದೇಶಕರಾದ ವಿದ್ಯಾಶಂಕರ್ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ