ನನ್ನ ಮತ್ತು ಧರ್ಮಸಿಂಗ್ ಸಂಬಂಧ ಕೆಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ: ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ.29- ದಿ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರೊಂದಿಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದೆ. ವೈಚಾರಿಕ ಭಿನ್ನಾಪ್ರಾಯವಿದ್ದರು 51 ವರ್ಷ ಜೊತೆಯಲ್ಲಿದ್ದೆವು. ನಮ್ಮ ಸಂಬಂಧ ಕೆಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತಿಳಿಸಿದರು.

ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕವಾದ ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ಇಂದು ವಿಧಾನಸೌಧದ ಬ್ಯಾಂಕ್ವೆಟ್‍ ಹಾಲ್ ನಲ್ಲಿ ಅಧಿಕಾರ ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ಪುತ್ರ ಅಜಯ್ ಸಿಂಗ್ ತಂದೆ ಧರ್ಮಸಿಂಗ್‍ಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಎರಡು ಬಾರಿ ಗೆದ್ದಿದ್ದಾರೆ. ಅಜಯ್ ಸಿಂಗ್‍ನಮ್ಮ ಜಿಲ್ಲೆಯಿಂದ ಮಂತ್ರಿಯಾಗಬೇಕಿತ್ತು.ನಾನು ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೆ ಎಂದು ನುಡಿದರು.

ನನ್ನ ಮಗಳು ಪ್ರಿಯಾದರ್ಶಿನಿಗೆ ಹೆಸರಿಡುವಾಗ ಇಂದಿರಾಗಾಂಧಿ ಹೆಸರು ಸೂಚಿಸಿದ್ದು ಧರ್ಮಸಿಂಗ್ ಅವರ ಪತ್ನಿ ಎಂದು ಸ್ಮರಿಸಿದ ಅವರು, ವಿಧಾನಸೌಧದಲ್ಲಿ ಧರ್ಮಸಿಂಗ್ ಮತ್ತು ನಾನು ಅವರ ಮಕ್ಕಳಿಗೆ ಹೆಸರಿಡುವಾಗ ಮಾತನಾಡಿಕೊಂಡಿದ್ದೆವು. ಮೊದಲು ಹುಟ್ಟಿದ್ದ ಮಗನಿಗೆ ವಿಜಯ್ ಸಿಂಗ್ ಅಂತಾ, ಎರಡನೇ ಮಗು ಹುಟ್ಟಿದಾಗ ಅಜಯ್ ಸಿಂಗ್ ಎಂದು ಹೆಸರಿಡಲಾಯಿತು. ಅವರಿಬ್ಬರು ಹುಟ್ಟಿದ್ದು ಒಂದೇ ದಿನವಾಗಿದೆ ಎಂದು ಧರ್ಮಸಿಂಗ್ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಅಜಯ್ ಸಿಂಗ್‍ರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಿದ್ದಾರೆ. ಅದನ್ನು ಗೌರವಿಸಿ ಇಂದು ಅಧಿಕಾರ ಸ್ವಿಕರಿಸುತ್ತಿದ್ದಾರೆ.ಸಚಿವ ಸ್ಥಾನ ಸಿಗದಕ್ಕೆ ನಿರಾಸೆ ಬೇಡ.ಮುಂದೆ ಜನಸೇವೆ ಮಾಡುವ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಧರ್ಮಸಿಂಗ್ï ಅವರ ಜಾತಿಯಲ್ಲಿ ಅವರೊಬ್ಬರೆ ಶಾಸಕರು.ಆದರೆ ರಾಜ್ಯದ 223 ಜನ ಶಾಸಕರು ಪಕ್ಷಾತೀತವಾಗಿ ಎಲ್ಲರು ಅವರ ಜೊತೆಯಲ್ಲಿ ಇರುತ್ತಿದ್ದರು.

ಕ್ಷೇತ್ರದಲ್ಲಿ 200-300 ಸ್ವಜಾತಿಯವರನ್ನು ಹೊಂದಿದ್ದರು ನಿರಂತರವಾಗಿ ಅವರೇ ಗೆಲ್ಲುತ್ತಿದ್ದರು. ಅದೇಗೆ ಎಂಬ ಗುಟ್ಟನ್ನು ಖರ್ಗೆ ಮತ್ತು ಧರ್ಮಸಿಂಗ್ ನಮಗೆ ಹೇಳಿಕೊಡಲೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವೆಲ್ಲ ಒಮ್ಮೆ ಗೆಲ್ಲುತ್ತೇವೆ. ಒಮ್ಮೆ ಸೋಲುತ್ತೇವೆ. ಖರ್ಗೆ, ಧರ್ಮಸಿಂಗ್ ಜೊತೆಯಾಗಿ ಕಲ್ಬುರ್ಗಿ ಚಿತ್ರಣವನ್ನೇ ಬದಲಾಯಿಸಿದ್ದಾರೆ.ಹಿಂದಿಗಿಂದಲೂ ಈಗ ಹೆಚ್ಚು ಅಭಿವೃದ್ಧಿಯಾಗಿದೆ.ಇನ್ನು ಮುಂದೆ ಪ್ರಿಯಾಂಕ್, ಅಜಯ್, ವಿಜಯ್ ಸೇರಿ ಕಲ್ಬುರ್ಗಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿ ಎಂದು ಆಶಿಸಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಜಾತಿಯಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿದ್ದರು ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದ ಧರ್ಮಸಿಂಗ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಆ ಭಾಗದ ಅಪಾರ ಸಂಖ್ಯೆಯ ಜನ ಧರ್ಮಸಿಂಗ್ ಮತ್ತು ಅಜಯ್ ಸಿಂಗ್ ಮೇಲೆ ಪ್ರೀತಿ ಇಟ್ಟಿದ್ದಾರೆ.ಅಜಯ ಸಿಂಗ್ ಸಚಿವರಾಗಬೇಕಿತ್ತು, ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಯಲ್ಲೇ ಉತ್ತಮ ಕೆಲಸ ಮಾಡಲಿ.ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುವ ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಡಿಸಲು ಶ್ರಮಿಸಲಿ ಎಂದು ಸಲಹೆ ನೀಡಿದರು.

ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ರಾಜ್ಯ ರಾಜಕೀಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಉತ್ತಮ ಸ್ನೇಹಿತರಾಗಿದ್ದರು.ಅವರಂತೆ ಅವರ ಮಕ್ಕಳಾದ ಪ್ರೀಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಉತ್ತಮ ಸ್ನೇಹಿತರಾಗಿ ಬಾಳಲಿ ಎಂದು ಹಾರೈಸಿದರು.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜಕೀಯದಲ್ಲಿ ಧರ್ಮಸಿಂಗ್ ಅಜಾತ ಶತ್ರು. ಎಲ್ಲರ ಜೋತೆ ಅನ್ಯೋನ್ಯತೆಯಿಂದ ಇದ್ದರು. ಅದೇ ರೀತಿ ಅಜೇಯ್ ಸಿಂಗ್ ಸದಾ ಹನ್ಮುಖಿರಾಗಿ, ಜನಾನುರಾಗಿ ಬೆಳೆಯುತ್ತಿದ್ದಾರೆ. ತಂದೆಯಂತೆ ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್, ಸಚಿವರಾದ ಇ.ತುಕರಾಮ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ, ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ಪ್ರಕಾಶ್ ರಾಥೋಡ್ ಮತ್ತಿತರರು ಹಾಜರಿದ್ದರು.

ಅಂತರ ಕಾಯ್ದುಕೊಂಡ ಸಿಎಂ
ಇಂದು ನಡೆದ ಅಜಯ್‍ಸಿಂಗ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ.
ಜೆಡಿಎಸ್ ಶಾಸಕರು, ಸಚಿವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ಮುಜುಗರಕ್ಕೊಳಗಾದ ಸಿಎಂ, ಇಂದು ಬಜೆಟ್ ಪೂರ್ವಭಾವಿ ಸಭೆಯಲ್ಲೇ ನಿರತರಾಗಿ ಇಂದಿನ ಕಾರ್ಯಕ್ರಮದಲ್ಲೂ ಭಾಗವಹಿಸದೆ ದೂರವೇ ಉಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ